ಸೋಲಾಪುರ (ಜಯದೇವಿತಾಯಿ ಲಿಗಾಡೆ ಮಹಾದ್ವಾರ):

ಶಿಕ್ಷಣಕ್ಕಾಗಿ ಕನ್ನಡ ಶಾಲೆಗಳನ್ನು ಸ್ಥಾಪಿಸುವ ಹಾಗೂ ಇಡೀ ಕನ್ನಡ ನಾಡಿನಲ್ಲಿ ಸಾಕ್ಷರತೆ ಹರಡುವ ಕಾರ್ಯ ಮಾಡಿದ ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸುವುದು ಹಾಗೂ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಿಗೆ ಅವರ ಹೆಸರು ನಾಮಕರಣ ಮಾಡಬೇಕು.!

ಇದು ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಲಾಪುರದಲ್ಲಿ ಆಯೋಜಿಸಿರುವ ಹೊರನಾಡ ಕನ್ನಡ ಸಂಘಗಳ 10ನೇ ಮೇಳದಲ್ಲಿ ಕನ್ನಡಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ ಗೋಷ್ಠಿಯಲ್ಲಿ ಕೇಳಿ ಬಂದ ಒತ್ತಾಸೆ.

ಜಯದೇವಿ ತಾಯಿ ಲಿಗಾಡೆ ಮರಾಠಿ ಪ್ರಭಾವಿತ ಪ್ರದೇಶದಲ್ಲಿದ್ದರೂ ಕನ್ನಡದ ಮೇಲಿನ ಅಭಿಮಾನ ಅವರನ್ನು ಅಪ್ಪಟ ಕನ್ನಡತಿಯನ್ನಾಗಿಸಿದೆ. 1952ರಲ್ಲಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರೂ ಆಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಓರ್ವ ಮಹಿಳೆಯರಿಗೆ ಪ್ರತಿ ವರ್ಷ ಸಂಘವು ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಗೋಷ್ಠಿಯಲ್ಲಿ ವಿದ್ಯಾವರ್ಧಕ ಸಂಘಕ್ಕೆ ಮನವಿ ಮಾಡಲಾಯಿತು.

ಜತೆಗೆ ಜಯದೇವಿ ತಾಯಿ ಮುಂದಿನ ಪೀಳಿಗೆಗೆ ಸ್ಫೂರ್ತಿ ಆಗಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಸರ್ಕಾರಿ ಶಾಲೆಗಳಿಗೆ ಅವರ ಹೆಸರು ನಾಮಕರಣ ಮಾಡಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲು ಗೋಷ್ಠಿಯ ವಿಷಯ ಮಂಡನೆಕಾರರು ವಿದ್ಯಾವರ್ಧಕ ಸಂಘಕ್ಕೆ ಮನವಿ ಮಾಡಿದರು.


ಚಿಂತಕ ರಾಮಕೃಷ್ಣ ಮರಾಠೆ ಮಾತನಾಡಿ, ವಾರದ ಮಲ್ಲಪ್ಪನವರ ಮೊಮ್ಮಗಳು ಜಯದೇವಿತಾಯಿ ಲಿಗಾಡೆ 1912ರಲ್ಲಿ ಸೋಲಾಪುರದಲ್ಲಿ ಜನಿಸಿದರು. ಮರಾಠಿ ಮಾತೃಭಾಷೆಯಾದರೂ ಕನ್ನಡಕ್ಕಾಗಿ ಅನಿಯಮಿತ ಕೆಲಸ ಮಾಡಿದ್ದಾರೆ. ಅಖಂಡ ಕರ್ನಾಟಕಕ್ಕಾಗಿ ಪ್ರಾಣ ನೀಡಿದವರು ಅವರು. ಸೋಲಾಪುರ ಕರ್ನಾಟಕಕ್ಕೆ ಸೇರಬೇಕು ಎಂಬ ವಾದವನ್ನು ಆಧಾರ ಸಮೇತ ಮಂಡಿಸಿದವರು. ಏಕೀಕರಣ ಚಳವಳಿ ಮಾಡಿದವರು. ಅವರ ಹೆಸರು ಅಜರಾಮರವಾಗಿರಲಿ ಎಂದು ಅವರ ಕೊಡುಗೆ ಸ್ಮರಿಸಿದರು. ಇದೇ ವಿಷಯವಾಗಿ ಮೈಸೂರಿನ ಡಾ. ರಾಜಶೇಖರ ಜಮದಂಡಿ ಹಾಗೂ ಪತ್ರಕರ್ತ ಬಸವರಾಜ ಹಿರೇಮಠ ಪ್ರತಿಕ್ರಿಯೆ ನೀಡಿದರು.

ಇದಕ್ಕೂ ಮುಂಚೆ ನಡೆದ ಮರಾಠಿ ಸಾಹಿತ್ಯಕ್ಕೆ ಬೇಂದ್ರೆಯವರ ಕೊಡುಗೆ ಗೋಷ್ಠಿಯಲ್ಲಿ ಶ್ರೀನಿವಾಸ ವಾಡಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಗುರುಸಿದ್ದಯ್ಯಸ್ವಾಮಿ ವಿಷಯ ಮಂಡಿಸಿದರು. ಬೇಂದ್ರೆ ಅವರ ಮರಾಠಿ ಸಾಹಿತ್ಯ, ಅವರು ಕನ್ನಡಿಗರನ್ನು ನೋಡಿದ ದೃಷ್ಟಿಗೂ ಭಿನ್ನವಿದೆ. ಅವರು ಮರಾಠಿಯಲ್ಲಿ ಬಿಡಿ ಸನ್ಯಾಸಿಗಳಾಗಿ, ಕರ್ನಾಟಕದಲ್ಲಿ ಪೀಠಸ್ಥ ಯತಿಗಳಾಗಿದ್ದರು ಎಂದು ಆನಂದ ಝಂಜರವಾಡ ನುಡಿದರು. ಜಯದೇವಿ ತಾಯಿ ಲಿಗಾಡೆ ಅವರ ಸೊಸೆ ಮಧುಮಾಲಾ ಲಿಗಾಡೆ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿಯನ್ನು ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು. ಇದೇ ವೇಳೆ ಸೋಲಾಪುರದ ಕನ್ನಡ ಪತ್ರಕರ್ತರಾದ ಶಿವಾನಂದ ಗೋಗಾಂವ ಹಾಗೂ ರಮೇಶ ನಾಯಕ ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು.

ಬೆಳಗಿನ ಗೋಷ್ಠಿಯಲ್ಲಿ ವಚನಕರರು ಮತ್ತು ಸಮಕಾಲೀನತೆ ಗೋಷ್ಠಿಯಲ್ಲಿ ನ.ಮ. ಮರುಳಾರಾಧ್ಯ, ಡಾ. ಕೆ.ಎಸ್. ಕೌಜಲಗಿ, ಮೀನಾಕ್ಷಿ ಬಾಳಿ, ಸವಿತಾ ನಡಕಟ್ಟಿ ಮಾತನಾಡಿದರು. ಸೊನ್ನಲಗಿ ಸಿದ್ಧರಾಮ ಅವರ ಕುರಿತು ಸೋಲಾಪುರದ ಡಾ. ಭೀಮಾಶಂಕರ ಬಿರಾದಾರ, ಇಂದುಮತಿ ಬಸವಂತಿ ಇದ್ದರು. ವೀರಣ್ಣ ಒಡ್ಡೀನ ಗೋಷ್ಠಿ ನಿರ್ವಹಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಘದ ಪದಾಧಿಕಾರಿಗಳಾದ ವಿಶ್ವೇಶ್ವರಿ ಹಿರೇಮಠ, ಡಾ. ಮಹೇಶ ಹೊರಕೇರಿ, ಗುರು ಹಿರೇಮಠ ಇದ್ದರು.