ಮೂಲ್ಕಿ: ಸಾಹಿತಿ, ಪತ್ರಕರ್ತರಾಗಿ, ರಂಗಭೂಮಿ ಸೇರಿದಂತೆ ಹಲವಾರು ರಂಗಗಳಲ್ಲಿ ಉತ್ತಮ ಕೊಡುಗೆ ನೀಡಿ, ಯುವಕರನ್ನು ಬೆಳೆಸಿದ ಪರಮಾನಂದ ಸಾಲ್ಯಾನ್‌ ಅವರಂತಹ ಸೂಕ್ತ ವ್ಯಕ್ತಿಯನ್ನು ರಂಗ ಭಾಸ್ಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಡಾ.ನಾ. ದಾಮೋದರ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ 18ನೇ ವಾರ್ಷಿಕೋತ್ಸವ ಅಂಗವಾಗಿ ರಂಗಭಾಸ್ಕರ-2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು ಸಂಘಟಕ ಪರಮಾನಂದ ಸಾಲ್ಯಾನ್‌ ಅವರಿಗೆ ನೀಡಲಾಗಿದ್ದು ಸಸಿಹಿತ್ಲುವಿನ ಸ್ವಗೃಹದಲ್ಲಿ ನಡೆದ ಸರಳ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಹಿರಿಯ ಜನಪದ ತಜ್ಞ ಕೆ.ಕೆ.ಪೇಜಾವರ ಅವರು ತಮ್ಮ ಮತ್ತು ಪರಮಾನಂದರ ದೀರ್ಘ ಕಾಲದ ಗೆಳೆತನದ ದಿನಗಳನ್ನು ಮೆಲುಕು ಹಾಕಿದರು. ಸಿನೆಮಾ, ರಂಗಭೂಮಿ ನಟ ನವೀನ್ ಡಿ ಪಡೀಲ್ ಮಾತನಾಡಿ ಪರಮಾನಂದ ಸಾಲ್ಯಾನ್‌ರವರ ಸಹೃದತೆ ಮತ್ತು ಕಲೆಯ ಬಗೆಗಿನ ಅಭಿಮಾನವನ್ನು ನೆನಪಿಸಿ ಶುಭಹಾರೈಸಿದರು. ಸಂಘಟಕ, ನಟ ಯತೀಶ್ ಬೈಕಂಪಾಡಿ ಮಾತನಾಡಿ ಪರಮಾನಂದರು ಇನ್ನಷ್ಟು ಆತ್ಮಸ್ಥೈರ್ಯದಿಂದ ಇದ್ದು ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಶಸ್ತಿಯು ಸನ್ಮಾನ ಪತ್ರ, ಸ್ಮರಣಿಕೆ ಮತ್ತು ಪ್ರಶಸ್ತಿ ಮೊತ್ತ 15,000 ರು, ಹಾಗೂ ರಂಗಸಂಗಾತಿ ಗೆಳೆಯರ ಬಳಗ ಕೊಡಮಾಡಿದ 20,000 ರು. ಸೇರಿ 35,000 ರು. ಮೊತ್ತವನ್ನು ಒಳಗೊಂಡಿತ್ತು. ಜಾದೂಗಾರ ಕುದ್ರೋಳಿ ಗಣೇಶ್, ಹಿರಿಯ ನಟರಾದ ಸಂತೋಷ್ ಶೆಟ್ಟಿ, ಮುರಳೀಧರ ಕಾಮತ್, ಉಡುಪಿಯ ರವಿರಾಜ್ ಎಚ್.ಪಿ., ರಾಜೇಶ್ ಭಟ್ ಪಣಿಯಾಡಿ, ಮೈಮ್ ರಾಮದಾಸ್, ಜಯಶೀಲ್, ಜಯದೇವ್, ಹರಿಪ್ರಸಾದ್ ಕುಂಪಲ, ರಂಜನ್ ಬೋಳೂರು, ಪ್ರಮೀಳಾ ದೀಪಕ್, ಯಶೋಧರ ಕೋಟ್ಯಾನ್, ಉಪನ್ಯಾಸಕ ಕರುಣಾಕರ ಬಳ್ಕೂರು, ರಂಗಸಂಗಾತಿಯ ವಿಶ್ವಸ್ಥ ಮಂಡಳಿ ಸದಸ್ಯರಾದ ಕರುಣಾಕರ ಶೆಟ್ಟಿ, ನಾಗೇಶ್ ಬಜಾಲ್, ಚಂದ್ರಶೇಖರ ಕೂಳೂರು ಮತ್ತಿತರರಿದ್ದರು. ರಂಗಸಂಗಾತಿ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ನಿರೂಪಿಸಿದರು.