ಹಿಂಸೆಯಿಲ್ಲದೇ ಬದುಕುವ ಹಕ್ಕು ಪ್ರಾಣಿಗಳು ಹೊಂದಿವೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಾಲೀಕನಿಂದ ಹಲ್ಲೆಗೆ ಒಳಗಾಗಿರುವ ಒಂಬತ್ತು ನಾಯಿಗಳನ್ನು ಪುನಃ ಮಾಲೀಕನ ಸುಪರ್ದಿಗೆ ನೀಡದಿರಲು ಮತ್ತು ಅವುಗಳನ್ನು ಪ್ರಾಣಿ ದಯಾ ಸಂಘಟನೆ ‘ಪೇಟಾ’ ವಶದಲ್ಲಿಡಲು ಬುಧವಾರ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿಂಸೆಯಿಲ್ಲದೇ ಬದುಕುವ ಹಕ್ಕು ಪ್ರಾಣಿಗಳು ಹೊಂದಿವೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಾಲೀಕನಿಂದ ಹಲ್ಲೆಗೆ ಒಳಗಾಗಿರುವ ಒಂಬತ್ತು ನಾಯಿಗಳನ್ನು ಪುನಃ ಮಾಲೀಕನ ಸುಪರ್ದಿಗೆ ನೀಡದಿರಲು ಮತ್ತು ಅವುಗಳನ್ನು ಪ್ರಾಣಿ ದಯಾ ಸಂಘಟನೆ ‘ಪೇಟಾ’ ವಶದಲ್ಲಿಡಲು ಬುಧವಾರ ಆದೇಶಿಸಿದೆ.ನಾಯಿಗಳನ್ನು ಮಾಲೀಕನಿಗೆ ನೀಡುವಂತೆ ನಗರದ 31ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ ಕಳೆದ ಏ.25ರಂದು ನೀಡಿದ್ದ ಆದೇಶ ರದ್ದು ಕೋರಿ ಪೀಪಲ್ಸ್ ಫಾರ್ ದಿ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ವಿಡಿಯೋಗಳಲ್ಲಿ ಮಾಲೀಕನು ನಾಯಿಗಳಿಗೆ ಕ್ರೂರವಾಗಿ ಹೊಡೆಯುವ ದೃಶ್ಯಗಳಿವೆ. ಕ್ರೌರ್ಯ ಮೆರೆದವನಿಗೆ ನಾಯಿಗಳ ಸುಪರ್ದಿಗೆ ನೀಡಿದ ಮ್ಯಾಜಿಸ್ಟೇಟ್ ಆದೇಶ ಸರಿಯಲ್ಲ. ಪ್ರಾಣಿಗಳಿಗೂ ಹಿಂಸೆಯಿಂದ ರಕ್ಷ ಣೆ ಪಡೆದುಕೊಳ್ಳುವ ಹಕ್ಕಿದೆ. ಮೂಕ ಪ್ರಾಣಿಗಳೆಂದು ನಾವು ಅವುಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗದು ಎಂದು ಹೇಳಿದೆ.ಅಲ್ಲದೆ, ಮಾಲೀಕನು ನಾಯಿಗಳನ್ನು ಕ್ರೂರವಾಗಿ ನಡೆಸಿಕೊಂಡಿರುವುದು ದೃಢಪಟ್ಟಿದ್ದರೂ ಸಹ ಮ್ಯಾಜಿಸ್ಪ್ರೇಟ್ ಅವರು ಹೇಗೆ ಅಂತಹ ಮಾಲೀಕನಿಗೆ ನಾಯಿಗಳನ್ನು ನೀಡುವಂತೆ ಆದೇಶ ನೀಡಿದರು ಎಂಬುದು ಅರ್ಥವಾಗುತ್ತಿಲ್ಲ. ಪ್ರಾಣಿಗಳಿಗೂ ಕೂಡಾ ಹಿಂಸೆಯಿಲ್ಲದೇ ಬದುಕುವ ಹಕ್ಕಿದೆ. ಎಷ್ಟು ದಿನ ನಾಯಿಗಳು ನೋವು ಸಹಿಸಿಕೊಳ್ಳಲು ಸಾಧ್ಯ ಎಂದು ನ್ಯಾಯಪೀಠ ಆಘಾತ ವ್ಯಕ್ತಪಡಿಸಿತು.
ಪೇಟಾ ಸಂಸ್ಥೆಯ ಪರ ವಕೀಲರು, ಮಾಲೀಕರಿಂದ ದೌರ್ಜನ್ಯ ಅನುಭವಿಸುತ್ತಿದ್ದ ನಾಯಿಗಳನ್ನು ರಕ್ಷಿಸಲಾಗಿದೆ. ಆದರೆ, ಮ್ಯಾಜಿಸ್ಟೇಟ್ ಕೋರ್ಟ್ ಮತ್ತೆ ಅವುಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡಲು ಆದೇಶಿಸಿರುವುದರಿಂದ ಮತ್ತೆ ನಾಯಿಗಳ ಪ್ರಾಣಕ್ಕೆ ಆಪತ್ತು ಎದುರಾಗಿದೆ. ಹಾಗಾಗಿ ನಾಯಿಗಳ ರಕ್ಷಿಸುವ ಉದ್ದೇಶದಿಂದ ಅವುಗಳನ್ನು ಪೇಟಾ ಸಂಸ್ಥೆಯ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು.ಈ ಮನವಿ ಮೇರೆಗೆ ಒಂಬತ್ತು ನಾಯಿಗಳನ್ನು ಪೇಟಾ ಸಂಸ್ಥೆಯ ವಶದಲ್ಲಿಡಲು ಆದೇಶಿಸಿತು.
ಪ್ರಕರಣದ ವಿವರ:ನಗರದ ನಾಗಸಂದ್ರದ ವಾಸಿ ಕೆ.ಇ. ರಮೇಶ್ ಎಂಬಾತನ ಬಳಿ ವಿವಿಧ ತಳಿಯ 9 ನಾಯಿಗಳಿದ್ದವು. ಆತ ನಾಯಿಗಳ ಮೇಲೆ ಪದೇ ಪದೇ ವೈರ್ ಹಾಗೂ ಪೈಪ್‌ಗಳಿಂದ ಹಲ್ಲೆನಡೆಸುವುದು, ಲೈಂಗಿಕ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತ್ತು. ಹಾಗಾಗಿ, ಆತ ನಾಯಿಗಳಿಗೆ ಹಿಂಸೆ ನೀಡುತ್ತಿರುವ ಕೆಲ ವಿಡಿಯೋಗಳೊಂದಿಗೆ ನೆರೆಹೊರೆಯವರು ಪೇಟಾ ಸಂಸ್ಥೆಗೆ ದೂರು ನೀಡಿದ್ದರು.
ಆ ದೂರಿನ ಮೇರೆಗೆ ಪೇಟಾ ಸಂಸ್ಥೆಗೆ 9 ನಾಯಿಗಳನ್ನು ರಕ್ಷಿಸಿ ತನ್ನ ಸುಪರ್ದಿಯಲ್ಲಿ ಸುರಕ್ಷಿತವಾಗಿಟ್ಟುಕೊಂಡಿತ್ತು. ಇದೇ ವೇಳೆ ಬಿಎನ್ ಎಸ್ 2023ರಡಿ ಸೆಕ್ಷನ್ 325 ಮತ್ತು 62, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆದೆ 1960ರಡಿ ಸೆಕ್ಷನ್11(1) ರಡಿ ಎಫ್‌ಐಆರ್ ದಾಖಲು ಮಾಡಿತ್ತು.ಮತ್ತೊಂದೆಡೆ ಮಾಲೀಕ ರಮೇಶ್ ನ್ಯಾಯಾಲಯದ ಮೊರೆ ಹೋಗಿದ್ದರು. ಮ್ಯಾಜಿಸ್ಪ್ರೇಟ್ ನಾಯಿಗಳನ್ನು ಮಾಲೀಕನಿಗೆ ಹಿಂತಿರುಗಿಸಲು ಅನುಮತಿ ನೀಡಿದ್ದರು. ಅದನ್ನು ಪ್ರಶ್ನಿಸಿ ಪೇಟಾ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು., ಹೈಕೋರ್ಟ್ ಕಳೆದ ಮೇ 21ರಂದು ಮ್ಯಾಜಿಸ್ಪ್ರೇಟ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿತ್ತು.
