ನಕಲಿ ನೋಟು ಕಳ್ಳಸಾಗಣೆ ಪ್ರಕರಣ : ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಿಂದ ಆರೋಪಿಗೆ 6 ವರ್ಷ ಜೈಲು ಶಿಕ್ಷೆ

KannadaprabhaNewsNetwork | Updated : Sep 02 2024, 04:50 AM IST

ಸಾರಾಂಶ

ಪಶ್ಚಿಮ ಬಂಗಾಳ ಮೂಲದ ಶರೀಫ್‌ ಉಲ್‌ ಇಸ್ಲಾಂ ಎಂಬಾತನಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ನಕಲಿ ನೋಟು ಕಳ್ಳಸಾಗಣೆ ಪ್ರಕರಣದಲ್ಲಿ ಆರು ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಮತ್ತು ₹5 ಸಾವಿರ ದಂಡ ವಿಧಿಸಿದೆ. 

 ಬೆಂಗಳೂರು : ನಕಲಿ ನೋಟು ಕಳ್ಳ ಸಾಗಣೆ ಪ್ರಕರಣ ಸಂಬಂಧ ಅಪರಾಧಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಆರು ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಪಶ್ಚಿಮ ಬಂಗಾಳ ಮೂಲದ ಶರೀಫ್‌ ಉಲ್‌ ಇಸ್ಲಾಂ ಅಲಿಯಾಸ್ ಶರೀಪುದ್ದೀನ್‌ ಶಿಕ್ಷೆಗೆ ಗುರಿಯಾದ ಅಪರಾಧಿ. ಇದರೊಂದಿಗೆ ಈ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಅಪರಾಧಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. 2018ರಲ್ಲಿ ಚಿಕ್ಕೋಡಿಯಲ್ಲಿ ನಡೆದಿದ್ದ ಈ ನಕಲಿ ನೋಟು ಕಳ್ಳ ಸಾಗಣೆ ಸಂಬಂಧ ಎನ್‌ಐಎ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಪ್ರಕರಣದ ವಿವರ: ಅಪರಾಧಿ ಶರೀಫ್‌ ಉಲ್‌ ಇಸ್ಲಾಂ ಇತರೆ ಆರು ಮಂದಿ ಅಪರಾಧಿಗಳೊಂದಿಗೆ 2018ರಲ್ಲಿ ₹82 ಸಾವಿರ ಮೌಲ್ಯದ 41 ಭಾರತೀಯ ನಕಲಿ ನೋಟುಗಳನ್ನು ಬಾಂಗ್ಲಾದೇಶದ ಗಡಿಯಿಂದ ಭಾರತದ ವಿವಿಧ ಭಾಗಗಳಿಗೆ ಕಳ್ಳ ಸಾಗಣೆ ಮಾಡಿ ಚಲಾವಣೆ ಮಾಡಲು ಸಂಚು ರೂಪಿಸಿದ್ದ. ಇತರೆ ಆರೋಪಿಗಳನ್ನು ಸಂಪರ್ಕಿಸಲು ನಕಲಿ ಸಿಮ್‌ ಕಾರ್ಡ್‌ ಖರೀದಿಸಿದ್ದ.

ತನಿಖೆ ವೇಳೆ ಈ ನಕಲಿ ನೋಟುಗಳ ಕಳ್ಳಸಾಗಣೆ ಹಾಗೂ ವಹಿವಾಟಿನ ಜಾಡು ಬಹಿರಂಗವಾಗಿತ್ತು. ಅಪರಾಧಿ ಶರೀಫ್ ಉಲ್‌ ಇಸ್ಲಾಂ ಈ ಹಿಂದೆ ಪ್ರಕರಣದ ಪ್ರಮುಖ ಕಿಂಗ್‌ಪಿನ್‌ ಪಶ್ಚಿಮ ಬಂಗಾಳ ಮೂಲದ ದಲಿಮ್‌ ವಿಯಾಗೆ ₹10.30 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ಪೂರೈಸಿ, ದೇಶದ ವಿವಿಧೆಡೆ ಚಲಾವಣೆ ಮಾಡಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ನಕಲಿ ನೋಟುಗಳ ಕಳ್ಳ ಸಾಗಣೆ ಹಾಗೂ ಚಲಾವಣೆಯ ಹಿಂದೆ ಭಾರತದ ಆರ್ಥಿಕ ಪರಿಸ್ಥಿತಿ ಮತ್ತು ಆರ್ಥಿಕ ಭದ್ರತೆಯನ್ನು ಅಸ್ಥಿರಗೊಳಿಸುವ ಉದ್ದೇಶವಿರುವುದು ತನಿಖೆಯಲ್ಲಿ ಬಯಲಾಗಿತ್ತು.

ಪ್ರಕರಣದಲ್ಲಿ ಎನ್‌ಐಎ ತನಿಖೆ ನಡೆಸಿ ಮೂರು ದೋಷಾರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಏಳು ಮಂದಿ ಅಪರಾಧಿಗಳಿಗೆ ನಕಲಿ ನೋಟುಗಳನ್ನು ಪೂರೈಕೆ ಮಾಡಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳ ವಿರುದ್ಧ ತನಿಖೆ ಮುಂದುವರೆದಿದೆ ಎಂದು ಎನ್‌ಐಎ ತಿಳಿಸಿದೆ.

Share this article