ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಅಪರಾಧಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ತುರ್ತು ಸಹಾಯವಾಣಿ 112ಗೆ ಸಂಪರ್ಕಿಸಬಹುದು ಎಂದು ಎಸ್ಪಿ ಕೋರಿದ್ದಾರೆ.
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆಗಳ ಮೇಲೆ ನಿರಂತರವಾಗಿ ತೀವ್ರ ನಿಗಾ ವಹಿಸಲಾಗಿದ್ದು, ಕಳೆದ ಮೂರು ತಿಂಗಳಲ್ಲಿ ವಿವಿಧ ಅಪರಾಧ ಘಟನೆಗಳಿಗೆ ಸಂಬಂಧಿಸಿದಂತೆ ಸುಮಾರು 729ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರಸಕ್ತ ಸಾಲಿನ ಜನವರಿ, ಫೆಬ್ರವರಿ, ಮಾರ್ಚ್ ನಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ, ಇಸ್ಪಿಟ್, ಮಟ್ಕಾ, ಜೂಜಾಟ ಸೇರಿದಂತೆ ಹಲವು ಸಂಘಟಿತ ಅಪರಾಧಗಳನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಅದರಲ್ಲಿ ಇಸ್ಪೇಟ್ ದಂಧೆಯಡಿ 105, ಮಟ್ಕಾ 172, ಜೂಜಾಟ 22, ಕೋಳಿ ಪಂದ್ಯ 18, ಅಗತ್ಯ ಸರಕುಗಳ ಕಾಯ್ದೆಯಡಿ 13, ಅಕ್ರಮ ಮರಳು ಗಣಿಗಾರಿಕೆ 207, ಅಬಕಾರಿ 121, ಎನ್ಡಿಪಿಎಸ್ ಗಾಂಜಾದ 71 ಪ್ರಕರಣಗಳನ್ನು ದಾಖಲಿಸಿ ಲಾಗಿದೆ ಅದೇ ರೀತಿ ಅಬಕಾರಿ ಇಲಾಖೆಯಿಂದ 121 ಪ್ರಕರಣಗಳಲ್ಲಿ 23 ಪ್ರಕರಣಗಳು ಅಕ್ರಮ ಸೇಂದಿ ಮಾರಾಟದ್ದಾಗಿದ್ದು, 23 ಪ್ರಕರಣಗಳಲ್ಲಿ 832 ಲೀಟರ್ ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇದಲ್ಲದೇ 71 ಗಾಂಜಾ ಪ್ರಕರಣಗಳಲ್ಲಿ 8 ಪ್ರಕರಣಗಳಲ್ಲಿ 11 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 4.35 ಕೆಜಿ ಗಾಂಜಾವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುವ ವಿವಿಧ ಅಪರಾಧ ಪ್ರಕರಣಗಳನ್ನು ಇನ್ನೂ ಹೆಚ್ಚೆಚ್ಚು ಪತ್ತೆ ಹಚ್ಚಲು ಜನರ ಸಹಕಾರ ಅಗತ್ಯವಾಗಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತಲೂ ಯಾವುದೇ ಅಕ್ರಮ ಚಟುವಟಿಕೆಗಳು ಮತ್ತು ಅಪರಾಧಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ತುರ್ತು ಸಹಾಯವಾಣಿ 112ಗೆ ಸಂಪರ್ಕಿಸಬಹುದು ಎಂದು ಎಸ್ಪಿ ಕೋರಿದ್ದಾರೆ.ಮಕ್ಕಳ ಅಪಹರಣ ಮತ್ತು ನಾಪತ್ತೆ ಕುರಿತು ಇಲಾಖೆಗಳೊಂದಿಗೆ ಸಭೆ:ರಾಯಚೂರು: ಇಲ್ಲಿನ ಎಸ್ಪಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ಅಪಹರಣ ಮತ್ತು ನಾಪತ್ತೆ ಕುರಿತು ವಿವಿಧ ಇಲಾಖೆಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಸೋಮವಾರ ಸಭೆಯನ್ನು ನಡೆಸಿದರು.ಈ ವೇಳೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಾಲಕಿಯರ ಹಾಗೂ ಯುವತಿ ಅಪಹರಣ ಮತ್ತು ನಾಪತ್ತೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ, ಶಾಲಾ ಹಾಗೂ ಕಾಲೇಜುಗಳ ಪರೀಕ್ಷೆಗಳು ಮುಗಿದ ಹಿನ್ನೆಲೆ ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ ಕರೆದುಕೊಂಡು ಹೋಗುವ ಘಟನೆಗಳು ಘಟಿಸುತ್ತಿದ್ದು, ಅದ್ದರಿಂದ ಪೋಷಕರು ತಮ್ಮ ಮಕ್ಕಳ ಮೇಲೆ ಅದರಲ್ಲಿಯೂ ಹೆಣ್ಣು ಮಕ್ಕಳ ಮೇಲೆ ತೀವ್ರ ನಿವಾವಹಿಸಿ, ಬುದ್ದಿವಾದ ಹೇಳಬೇಕು ಎಂದರು.ವಿಶೇಷವಾಗಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಮುಗಿದು ಹೋಗಿದ್ದು ಬಾಲಕಿಯರರನ್ನು ಪುಸಲಾಯಿಸಿ ಹೊರಗಡೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ, ಈ ಮೂರ್ನಾಲ್ಕು ತಿಂಗಳು ಮಕ್ಕಳು ಹೊರಗೆ ಹೆಚ್ಚು ಸಮಯ ಕಳೆಯುವ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.18 ವರ್ಷದೊಳಿಗಿನ ಬಾಲಕಿಯರು ಮೇಲೆ ಪೋಷಕರು ಹೆಚ್ಚಿನ ನಿಗಾವಹಿಸಬೇಕಾಗಿದೆ, ಮಕ್ಕಳಿಗೆ ಒಳ್ಳೆಯದು-ಕೆಟ್ಟದ ಬಗ್ಗೆ ಬುದ್ದಿವಾದ ಹೇಳಿ, ಅಪರಿಚಿತರೊಂದಿಗೆ ಸಂಪರ್ಕ ಬೆಳೆಸಬಾರದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎಸ್ಪಿ ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್.ಎಸ್ ಸಾತ್ವಿಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿ ಹಾಜರಿದ್ದರು.
ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ; ಆರೋಪಿ ಬಂಧನ:ರಾಯಚೂರು: ಇಲ್ಲಿನ ಜೋಗಳಾಂಬ ಗದ್ವಾಲ್ ರಸ್ತೆಯ ಎ.ಪಾಪರೆಡ್ಡಿ ಮಿಲ್ ಸಮೀಪದಲ್ಲಿ ಪೊಲೀಸರು ಪೆಟ್ರೋಲಿಂಗ್ ಮಾಡುವ ಸಮಯದಲ್ಲಿ ಸಿಎಚ್ ಪೌಡರ್ ಮಿಶ್ರತ ಸೇಂದಿ ಮಾರಾಟ ಮಾಡುತ್ತಿದ್ದ ಸ್ಥಳೀಯ ನವಾಬಗಡ್ಡೆ ನಿವಾಸಿ ಕೆಂಚಪ್ಪ (40)ಯನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿ ಸಿಹೆಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿರುವುದರ ಕುರಿತು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಮಾರ್ಕೇಟ್ ಯಾರ್ಡ್ ಪೊಲೀಸರು ಆರೋಪಿಯನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.