- ಹಾಲಿನ ಪುಡಿ ಅಕ್ರಮ ಮಾರಾಟದಿಂದ ಬಂದಿದ್ದ ಹಣ
- ವ್ಯತ್ಯಾಸ ಸರಿಪಡಿಸಲು ೫೪ ಸಾವಿರ ಕೆಜಿ ಗ್ರೈನ್ ಸ್ಟಾರ್ಚ್ ಖರೀದಿಕನ್ನಡಪ್ರಭ ವಾರ್ತೆ ಮಂಡ್ಯ
ಮನ್‌ಮುಲ್‌ನ ಎಫ್‌ಜಿಎಸ್ ಶಾಖೆಯ ಮುಖ್ಯಸ್ಥರಾಗಿದ್ದ ಜಾಧವ್ ೧೧೦.೪ ಟನ್ ಹಾಲಿನ ಪುಡಿ ಅಕ್ರಮ ಮಾರಾಟದಿಂದ ಬಂದ ಹಣದಲ್ಲಿ ೭೫ ಲಕ್ಷ ರು. ಹಣವನ್ನು ಅಧ್ಯಕ್ಷರಾಗಿದ್ದ ಯು.ಸಿ.ಶಿವಕುಮಾರ್ ಅವರಿಗೆ ನೀಡಿದ್ದರು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.ಮನ್‌ಮುಲ್ ಒಕ್ಕೂಟದ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗುವ ಕೆನೆರಹಿತ ಹಾಲಿನಪುಡಿ ಬ್ಯಾಗ್‌ಗಳನ್ನು ಕದ್ದು ಮುಚ್ಚಿ ಹಾಲಿನಪುಡಿ ಸಾಗಾಣಿಕೆ ಮಾಡುವ ವಾಹನಗಳಲ್ಲಿ ಲೋಡ್ ಮಾಡಿ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಅನಂತ ಅವರಿಗೆ ಸೇರಿದ ಗೋದಾಮಿಗೆ ಸಾಗಿಸಿ ಅಲ್ಲಿಂದ ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ೨೦೨೫ರ ಜೂನ್‌ನಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋದಾಮಿನಲ್ಲಿ ಕಂಡುಬಂದ ಹಾಲಿನ ಪುಡಿ ಕೊರತೆಯನ್ನು ಸರಿದೂಗಿಸಲು ಬೆಂಗಳೂರಿನ ಪೀಣ್ಯದಿಂದ ೫೪.೯ ಟನ್ ಕಲಬೆರಕೆ ಹಾಲಿನ ಪುಡಿಯ ಬ್ಯಾಗ್‌ಗಳನ್ನು ಗೋದಾಮು-೧ಕ್ಕೆ ತಂದು ರೀ-ಬ್ಯಾಗ್ ಮಾಡಿಸಿದ್ದರು. ಈ ಕಲಬೆರಕೆ ಹಾಲಿನ ಪುಡಿಯ ಬ್ಯಾಗ್‌ಗಳನ್ನು ಒಂದು ಕೆಜಿಗೆ ೧೬೦ ರು.ನಂತೆ ೫೪ ಟನ್ ಖರೀದಿಸಿದ್ದರು. ಆದರೂ ಉಳಿಕೆ ೫೫.೫ ಟನ್ ಹಾಲಿನ ಪುಡಿ ಕೊರತೆಯನ್ನು ತುಂಬಿಸಲು ಸಾಧ್ಯವಾಗಿರಲಿಲ್ಲ ಎಂದು ತನಿಖೆಯಿಂದ ಗೊತ್ತಾಗಿರುವುದಾಗಿ ಹೇಳಿದರು.
ಹಾಲಿನಪುಡಿ ಕಲಬೆರಕೆ ಪ್ರಕರಣದಲ್ಲಿ ಇದುವರೆಗೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಎಫ್‌ಜಿಎಸ್ ಶಾಖೆ ಮುಖ್ಯಸ್ಥ ಪ್ರದೀಪ್‌ಕುಮಾರ್ ಜಾಧವ್ (೪೫), ಕಂಪ್ಯೂಟರ್ ಆಪರೇಟರ್ ಎಂ.ಸಿ.ಶೃತಿ (೩೨), ಮಾಸ್ಟರ್ ಇನ್ಸುಲೇಷನ್ ಗೋದಾಮು ಮೇಲ್ವಿಚಾರಕ ರವಿ (೩೭), ಲೋಡಿಂಗ್-ಅನ್‌ಲೋಡಿಂಗ್ ವಿಭಾಗದ ಶ್ರೀನಿವಾಸ್ (೪೪), ಹಾಲಿನಪುಡಿ ಉತ್ಪಾದನಾ ಘಟಕದ ಹಿಂದಿನ ಮುಖ್ಯಾಧಿಕಾರಿ ಶ್ರೀನಿವಾಸಮೂರ್ತಿ (೪೯), ಕೇರಳದ ಕ್ಯಾಲಿಕಟ್‌ನ ವಿಕೆಎಸ್ ಮಾರ್ಕೆಟಿಂಗ್ ಮಾಲೀಕ ಸುರೇಶ್ (೫೧), ಮನ್‌ಮುಲ್ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ (೫೦), ಒಕ್ಕೂಟದ ಗುತ್ತಿಗೆದಾರ ಯು.ಜಿ.ಸುರೇಶ್ (೩೭) ಬಂಧಿತರು.
ಎಫ್‌ಜಿಎಸ್ ವಿಭಾಗದಲ್ಲಿ ಜಾಧವ್ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅವರ ವಿರುದ್ಧ ಹಲವಾರು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಯು.ಸಿ.ಶಿವಕುಮಾರ್ ಅಧ್ಯಕ್ಷರಾಗಿ ಬಂದ ನಂತರದಲ್ಲಿ ಪ್ರದೀಪ್‌ಕುಮಾರ್ ಜಾಧವ್ ಮತ್ತೆ ಎಫ್‌ಜಿಎಸ್ ವಿಭಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ೩೦ ಲಕ್ಷ ರು. ಹಣವನ್ನು ಲಂಚದ ರೂಪದಲ್ಲಿ ನೀಡಿದ್ದರು. ಆನಂತರದಲ್ಲಿ ಹಾಲಿನಪುಡಿ ಅಕ್ರಮ ಮಾರಾಟವನ್ನು ಜೊತೆ ಸೇರಿಯೇ ಮಾಡಿಕೊಂಡು ಬಂದಿದ್ದರು ಎಂದು ತಿಳಿಸಿದರು.
ಹಾಲಿನ ಪುಡಿ ಅಕ್ರಮ ಮಾರಾಟದಿಂದ ಗೋದಾಮಿನಲ್ಲಿ ಉಂಟಾಗುತ್ತಿದ್ದ ವ್ಯತ್ಯಾಸವನ್ನು ಸರಿದೂಗಿಸಲು ಕೇರಳದಿಂದ ಗ್ರೈನ್ ಸ್ಟಾರ್ಚ್ ಖರೀದಿಸುತ್ತಿದ್ದ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಗ್ರೈನ್ ಸ್ಟಾರ್ಚ್‌ನ್ನು ಕೇರಳದ ಕ್ಯಾಲಿಕಟ್‌ನ ಕೊಯಿಲ್ ಆಂಡಿಯ ನಿದೀಶ್‌ಕುಮಾರ್ ಎಂಬಾತನಿಂದ ಅದೇ ಕೇರಳದ ವಿಕೆಎಸ್ ಮಾರ್ಕೆಟಿಂಗ್ ಮಾಲೀಕ ವಿ.ಕೆ.ಸುರೇಶ್ ಎಂಬಾತ ಖರೀದಿಸಿ ಅದನ್ನು ಒಕ್ಕೂಟದ ಗುತ್ತಿಗೆದಾರ ಯು.ಜಿ.ಸುರೇಶ್ ಮೂಲಕ ತಂದು ಹಾಲಿನ ಪುಡಿಗೆ ಮಿಶ್ರಣ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿರುವುದಾಗಿ ಹೇಳಿದರು.
ಗ್ರೈನ್ ಸ್ಟಾರ್ಚ್‌ನ್ನು ಮಾರಾಟ ಮಾಡುತ್ತಿದ್ದ ನಿದೀಶ್‌ಕುಮಾರ್ ಎಂಬ ವ್ಯಕ್ತಿ ಸೆಪ್ಟೆಂಬರ್ ೯ ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮರಣ ಪ್ರಮಾಣಪತ್ರದಲ್ಲಿ ಹೃದಯಾಘಾತ ಎಂದು ದಾಖಲಿಸಲಾಗಿದೆ. ಕಲಬೆರಕೆ ಹಾಲಿನಪುಡಿ ಪ್ರಕರಣ ದಾಖಲಾದ ನಂತರದಲ್ಲಿ ಸಾವನ್ನಪ್ಪಿದ್ದು, ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಡಿವೈಎಸ್ಪಿ ಯಶವಂತ್‌ಕುಮಾರ್ ಅವರು ಗೋಷ್ಠಿಯಲ್ಲಿದ್ದರು.
ಗ್ರೈನ್ ಸ್ಟಾರ್ಚ್ ಎಂದರೇನು?ಗ್ರೈನ್ ಸ್ಟಾರ್ಚ್‌ನ್ನು ಹಾಲಿಗೆ ಮಿಶ್ರಣ ಮಾಡುವುದಿಲ್ಲ. ಇದನ್ನು ಬಿಸ್ಕತ್ತು ಸೇರಿದಂತೆ ಅನೇಕ ಸಿಹಿ ತಿನಿಸುಗಳಿಗೆ ಉಪಯೋಗಿಸುತ್ತಾರೆ. ಇದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇದನ್ನು ಮಿಶ್ರಣ ಮಾಡುವ ತಿನಿಸುಗಳಲ್ಲಿ ಪ್ರೋಟೀನ್ ಅಂಶ ತೀರಾ ಕಡಿಮೆ ಪ್ರಮಾಣದಲ್ಲಿರುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ಹಸಿರು ಪ್ಯಾಕೆಟ್ ಹಾಲಿಗೆ ಹಾಲಿನಪುಡಿ ಮಿಶ್ರಣಮನ್ಮುಲ್ನಿಂದ ಹೊರತರಲಾಗುತ್ತಿರುವ ಹಸಿರು ಪ್ಯಾಕೆಟ್ ಹಾಲಿಗೆ ಹಾಲಿನಪುಡಿಯನ್ನು ಮಿಶ್ರಣ ಮಾಡುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಹಾಲಿನ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಕಾನೂನುಬದ್ಧವಾಗಿಯೇ ಹಾಲಿನಪುಡಿಯನ್ನು ಹಾಲಿಗೆ ಮಿಶ್ರಣ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಹಾಗಾಗಿ ಹಸಿರು ಪ್ಯಾಕೆಟ್ ಹಾಲು ಎಷ್ಟು ಸುರಕ್ಷಿತ ಎಂಬ ಅನುಮಾನ ಮೂಡಿದೆ.
ಕಲಬೆರಕೆ ಹಾಲಿನಪುಡಿ ಮಾರಾಟಮನ್ಮುಲ್ನಲ್ಲಿ ಕಲಬೆರಕೆಯಾಗಿರುವ ಹಾಲಿನಪುಡಿಯಲ್ಲಿ ಒಂದಷ್ಟು ಪ್ರಮಾಣವನ್ನು ಮಾರಾಟ ಮಾಡಲಾಗಿದೆ. ಸಾಮಾನ್ಯವಾಗಿ ಐಸ್ ಕ್ರೀಂ, ಸಿಹಿ ಉತ್ಪನ್ನಗಳು, ಹೋಟೆಲ್‌ನವರು ಇದನ್ನು ಬಳಸಿರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ.
ಟನ್‌ಗಟ್ಟಲೆ ಹಾಲಿನಪುಡಿ ಮಾರಾಟದಿಂದ ಸಿಕ್ಕಿಬಿದ್ದರು..!ಮನ್‌ಮುಲ್‌ನಲ್ಲಿ ಹಾಲಿನಪುಡಿ ಅಕ್ರಮ ಮಾರಾಟ ಹೊಸತೇನಾಗಿರಲಿಲ್ಲ. ಹಿಂದಿನಿಂದಲೂ ಈ ಅಕ್ರಮ ಮಾರಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಮೊದಲೆಲ್ಲಾ ಕೆಜಿಗಟ್ಟಲೆ ಹಾಲಿನಪುಡಿಯನ್ನು ಮಾತ್ರ ಅಕ್ರಮವಾಗಿ ಮಾರಾಟ ಮಾಡಿ ಕೊರತೆಯನ್ನು ಸುಲಭವಾಗಿ ಹೊಂದಾಣಿಕೆ ಮಾಡಿ ಅದರಿಂದ ಬಂದ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದರು. ಯಾವಾಗ ಟನ್‌ಗಟ್ಟಲೆ ಹಾಲಿನ ಪುಡಿಯನ್ನು ಅಕ್ರಮ ಮಾರಾಟಕ್ಕೆ ಇಳಿದರೋ ಆಗ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿಲ್ಲ. ಲೆಕ್ಕ ಪರಿಶೋಧನಾ ವರದಿಯಲ್ಲಿ ಎದುರಾದ ಕೋಟ್ಯಂತರ ರು. ವ್ಯತ್ಯಾಸವನ್ನು ಸರಿಪಡಿಸುವುದಕ್ಕೆ ತಿಣುಕಾಡುವಂತಾಯಿತು. ಟನ್‌ಗಟ್ಟಲೆ ಹಾಲಿನಪುಡಿಯನ್ನು ಕಲಬೆರಕೆ ಮಾಡುವುದೂ ಸುಲಭದ ಕೆಲಸವಾಗಿರಲಿಲ್ಲವಾದ್ದರಿಂದ ಹಗರಣ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬರಲು ಕಾರಣವಾಯಿತು ಎಂದು ತಿಳಿದುಬಂದಿದೆ.