ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ 9ನೇ ಆರೋಪಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

KannadaprabhaNewsNetwork |  
Published : May 03, 2026, 02:00 AM ISTUpdated : May 03, 2026, 04:46 AM IST
Terrorism

ಸಾರಾಂಶ

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದಲೇ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದ 9ನೇ ಆರೋಪಿ ವಿಕ್ರಮ್‌ ಕುಮಾರ್‌ ಅಲಿಯಾಸ್‌ ಛೋಟಾ ಉಸ್ಮಾನ್‌ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಅಪರಾಧಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿ ಶನಿವಾರ ಆದೇಶಿದೆ.

 ಬೆಂಗಳೂರು :  ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದಲೇ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದ 9ನೇ ಆರೋಪಿ ವಿಕ್ರಮ್‌ ಕುಮಾರ್‌ ಅಲಿಯಾಸ್‌ ಛೋಟಾ ಉಸ್ಮಾನ್‌ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಅಪರಾಧಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿ ಶನಿವಾರ ಆದೇಶಿದೆ.

ಈ ಮೂಲಕ ಈ ಪ್ರಕರಣದಲ್ಲಿ 8 ಮಂದಿಗೆ ಶಿಕ್ಷೆ ವಿಧಿಸಿದಂತಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಗ್ರ ಟಿ.ನಾಸೀರ್, ಆತನ ಸಹಚರರಾದ ಸಯ್ಯದ್ ಸುಹೇಲ್, ಮೊಹಮ್ಮದ್ ಉಮರ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮೊಹಮ್ಮದ್ ಫೈಜಲ್ ರಬಾನಿ, ಸನ್ಮಾನ್ ಖಾನ್‌ಗೆ ನ್ಯಾಯಾಯಲ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.

ನ್ಯಾಯಾಂಗ ಬಂಧನದಲ್ಲೇ ಇರುವ ಪ್ರಕರಣದ ಇತರೆ ಮೂವರು ಆರೋಪಿಗಳಾದ ಸಿಎಆರ್‌ ಎಎಸ್‌ಐ ಚಾಂದ್‌ ಪಾಷಾ, ಜೈಲಿನ ವೈದ್ಯ ನಾಗರಾಜ್‌ ಮತ್ತು ಜುನೈದ್‌ ಅಹ್ಮದ್‌ ತಾಯಿ ಅನೀಸ್ ಫಾತೀಮಾ ವಿರುದ್ಧದ ಆರೋಪಗಳ ಸಂಬಂಧ ವಿಚಾರಣೆ ಮುಂದುವರೆದಿದೆ. ಪ್ರಕರಣದ ಎರಡನೇ ಆರೋಪಿ ಜುನೈದ್‌ ಅಹಮ್ಮದ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಎನ್‌ಐಎ ಅಧಿಕಾರಿಗಳು ಪ್ರಯತ್ನ ಮುಂದುವರೆಸಿದ್ದಾರೆ.

ಜೈಲಿನಲ್ಲಿ ಉಗ್ರ ಟಿ.ನಾಸಿರ್‌ ಪರಿಚಯ:

ಇದೀಗ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ವಿಕ್ರಂ 2017ರಲ್ಲಿ ನಡೆದ ನೂರ್‌ ಎಂಬಾತನ ಕೊಲೆ ಪ್ರಕರಣದಲ್ಲಿ ಜುನೈದ್‌ ಅಹ್ಮದ್‌ ಹಾಗೂ ಇತರೆ ಆರೋಪಿಗಳ ಜತೆ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಈ ವೇಳೆ ಜೈಲಿನಲ್ಲೇ ಇದ್ದ ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆ ಸದಸ್ಯ ಟಿ.ನಾಸೀರ್‌ನ ಪರಿಚಯವಾಗಿತ್ತು. ಬಳಿಕ ಆತನ ಪ್ರಚೋದನೆಯಿಂದ ವಿಕ್ರಮ್‌ ಕುಮಾರ್‌ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಛೋಟಾ ಉಸ್ಮಾನ್‌ ಎಂದು ಹೆಸರು ಬದಲಿಸಿಕೊಂಡಿದ್ದ ಎಂದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಟಿ.ನಾಸಿರ್‌ ಸೂಚನೆ ಮೇರೆಗೆ ಸಂಚು:

ಬಳಿಕ ಇದೇ ಉಗ್ರ ಟಿ.ನಾಸೀರ್‌, ಜುನೈದ್‌ ಅಹ್ಮದ್‌ ಮತ್ತು ವಿಕ್ರಮ್‌ ಹಾಗೂ ಇತರೆ ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಲು ಸಹಕರಿಸಿದ್ದ. ಆ ಬಳಿಕ ಟಿ.ನಾಸೀರ್‌ ಸೂಚನೆ ಮೇರೆಗೆ ಜುನೈದ್‌ ಅಹ್ಮದ್‌, ವಿಕ್ರಂ ಸೇರಿ ಇತರೆ ಆರೋಪಿಗಳು ದೇಶದ ವಿವಿಧೆಡೆ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಬಳಿಕ ಈ ಜುನೈದ್‌ ಅಹಮ್ಮದ್‌ ವಿದೇಶಕ್ಕೆ ಪರಾರಿಯಾಗಿದ್ದ. ನಂತರ ಟಿ.ನಾಸೀರ್‌ ಮತ್ತು ಜುನೈದ್‌ ಅಹ್ಮಮದ್‌ ಜೊತೆಗೆ ಈ ವಿಕ್ರಂ ಫೋನ್‌ ಕರೆಗಳ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದ. ವಿದೇಶದಲ್ಲಿ ಇದ್ದುಕೊಂಡೇ ಜುನೈದ್‌ ಅಹಮ್ಮದ್‌, ವಿಕ್ರಂಗೆ ಹಣಕಾಸು ಪೂರೈಸುತ್ತಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.

ಅಂಬಾಲಾದಿಂದ ಹ್ಯಾಂಡ್‌ ಗ್ರೆನೇಡ್ ತಂದಿದ್ದ:

ಶಂಕಿತ ಉಗ್ರ ಜುನೈದ್‌ ಅಹ್ಮಮದ್‌ ಸೂಚನೆ ಮೇರೆಗೆ 2023ರ ಮೇನಲ್ಲಿ ವಿಕ್ರಮ್‌ ಕುಮಾರ್, ಹರಿಯಾಣದ ಅಂಬಾಲಕ್ಕೆ ಹೋಗಿ ಹ್ಯಾಂಡ್‌ ಗ್ರೆನೇಡ್‌ ಮತ್ತು ವಾಕಿ-ಟಾಕಿಗಳಿರುವ ಪಾರ್ಸೆಲ್‌ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದ. ಬಳಿಕ ಸೈಯದ್‌ ಸುಹೇಲ್ ಖಾನ್‌ ಮನೆಯಲ್ಲಿ ಉಳಿದುಕೊಂಡು ಜುನೈದ್‌ ಅಹ್ಮಮದ್‌ ತಂದೆ ಅಬ್ದುಲ್‌ ಬಶೀರ್‌ ಮತ್ತ ಜಾಹಿದ್‌ ತಬ್ರೇಜ್‌ಗೆ ಆ ಹ್ಯಾಂಡ್‌ ಗ್ರೆನೇಡ್‌ ಮತ್ತು ವಾಕಿಟಾಕಿಗಳನ್ನು ಹಸ್ತಾಂತರಿಸಿದ್ದ.

ಉಗ್ರ ಟಿ.ನಾಸೀರ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವಾಗ ಮಾರ್ಗ ಮಧ್ಯೆ ಹ್ಯಾಂಡ್‌ ಗ್ರೆನೇಡ್‌ ಸ್ಫೋಟಿಸಿ ತಪ್ಪಿಸಿಕೊಳ್ಳಲು ಸಂಚು ರೂಪಿಸಲಾಗಿತ್ತು. ಈ ಸಂಚು ಕಾರ್ಯರೂಪಕ್ಕೆ ತರಲು ಜುನೈದ್‌ ಅಹ್ಮದ್‌, ಮೊಹಮ್ಮದ್ ಉಮರ್‌, ಜಾಹೀದ್‌ ತಬ್ರೇಜ್‌ ಹಾಗೂ ಇತರರು ವಿಕ್ರಮ್‌ ಕುಮಾರ್‌ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರುವುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ
ಸ್ನೇಹಿತರಿಂದಲೇ ಯುವಕನ ಹತ್ಯೆ: ಆರೋಪಿಗಳಿಬ್ಬರ ಬಂಧನ