ರಸ್ತೆಯಲ್ಲಿ ಬಿದ್ದಿದ್ದ ಮರದ ಕೊಂಬೆಗೆ ಬೈಕ್ ಡಿಕ್ಕಿ: ಆಯಾತಪ್ಪಿ ಬಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವು

KannadaprabhaNewsNetwork | Updated : Aug 12 2024, 05:01 AM IST

ಸಾರಾಂಶ

ರಸ್ತೆಯಲ್ಲಿ ಬಿದ್ದಿದ್ದ ಮರದ ಕೊಂಬೆ ಮೇಲೆ ಬೈಕ್ ಹತ್ತಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾಗಡಿ- ಜಲಸೂರು ರಾಜ್ಯ ಹೆದ್ದಾರಿಯ ತಾಲೂಕಿನ ಗಡಿ ಗ್ರಾಮ ಕೆಸುವಿನಕಟ್ಟೆ ಗ್ರಾಮದ ಗೇಟ್ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

 ನಾಗಮಂಗಲ : ರಸ್ತೆಯಲ್ಲಿ ಬಿದ್ದಿದ್ದ ಮರದ ಕೊಂಬೆ ಮೇಲೆ ಬೈಕ್ ಹತ್ತಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾಗಡಿ- ಜಲಸೂರು ರಾಜ್ಯ ಹೆದ್ದಾರಿಯ ತಾಲೂಕಿನ ಗಡಿ ಗ್ರಾಮ ಕೆಸುವಿನಕಟ್ಟೆ ಗ್ರಾಮದ ಗೇಟ್ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದ ರೇವಣ್ಣ (30) ಮತ್ತು ಕಿಕ್ಕೇರಿಯ ಕೃಷ್ಣ (30) ಮೃತಪಟ್ಟ ದುರ್ದೈವಿಗಳು.

ಕಾರ್ಯನಿಮಿತ್ತ ಶನಿವಾರ ರಾತ್ರಿ ಕೆ.ಆರ್.ಪೇಟೆಯಿಂದ ನಾಗಮಂಗಲ ಕಡೆಗೆ ರೇವಣ್ಣ ಮತ್ತು ಕೃಷ್ಣ ಬೈಕ್‌ನಲ್ಲಿ ಬರುತ್ತಿದ್ದರು. ಕತ್ತಲಿನ ಜೊತೆಗೆ ರಸ್ತೆ ತಿರುವಿದ್ದ ಹಿನ್ನೆಲೆಯಲ್ಲಿ ಮಳೆ ಗಾಳಿಯಿಂದಾಗಿ ಹೆದ್ದಾರಿ ನಡು ರಸ್ತೆಯಲ್ಲಿ ಬಿದ್ದಿದ್ದ ಮರದ ಕೊಂಬೆಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ನಿಯಂತ್ರಣ ತಪ್ಪಿ ಇಬ್ಬರೂ ಸಹ ಕೆಲ ದೂರ ಬಿದ್ದು ಬೈಕ್ ಸವಾರ ಕೃಷ್ಣ ಹಾಗೂ ಹಿಂಬದಿ ಕುಳಿತಿದ್ದ ರೇವಣ್ಣ‌ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ರೇವಣ್ಣ ಹಾಗೂ ಕೃಷ್ಣ ಡ್ಯಾನ್ಸರ್‌ಗಳಾಗಿದ್ದು, ಆಕ್ರೇಸ್ಟ್ರಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ರವಿಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಯುವಕರಿಬ್ಬರ ಮೃತದೇಹಗಳನ್ನು ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

ಅರಣ್ಯ ಇಲಾಖೆ ವೈಫಲ್ಯ:

ರಸ್ತೆಗೆ ಬಿದ್ದಿದ್ದ ಮರ ಒಣಗಿ‌ ಶಿಥಿಲಗೊಂಡು ಹಲವು ತಿಂಗಳು ಕಳೆದಿದ್ದು ಮರ ಕತ್ತರಿಸಲು ಗುರುತಿಸಿ ನಂಬರ್ ಹಾಕಿ ಹಲವು ತಿಂಗಳು ಕಳೆದಿದ್ದರೂ ಕೂಡ ರಸ್ತೆಬದಿಯ ಒಣಮರವನ್ನು ಕತ್ತರಿಸುವಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ಸಿಪಿಐ ನಿರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟುವಂತಿತ್ತು. ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

Share this article