ಯಾದಗಿರಿ : ಕೆಂಪು ಡೈರಿಯಲ್ಲಿದೆ ಪಿಎಸ್‌ಐ ಪರಶುರಾಮ್‌ ಶಂಕಾಸ್ಪದ ಸಾವಿನ ಹಿಂದಿನ ರಹಸ್ಯ?

KannadaprabhaNewsNetwork |  
Published : Aug 11, 2024, 01:42 AM ISTUpdated : Aug 11, 2024, 04:21 AM IST
ಮೃತ ಪಿಎಸೈ ಪರಶುರಾಮ್‌. | Kannada Prabha

ಸಾರಾಂಶ

ಇಲ್ಲಿನ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಪರಶುರಾಮ್‌ ಅವರ ಶಂಕಾಸ್ಪದ ಸಾವಿನ ಹಿಂದಿನ ರಹಸ್ಯ ಕೆಂಪು ಡೈರಿಯಲ್ಲಿ ಅಡಗಿದೆಯೇ?  

ಆನಂದ್‌ ಎಂ.ಸೌದಿ

 ಯಾದಗಿರಿ :  ಇಲ್ಲಿನ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಪರಶುರಾಮ್‌ ಅವರ ಶಂಕಾಸ್ಪದ ಸಾವಿನ ಹಿಂದಿನ ರಹಸ್ಯ ಕೆಂಪು ಡೈರಿಯಲ್ಲಿ ಅಡಗಿದೆಯೇ? ಸಿಐಡಿ ಅಧಿಕಾರಿಗಳ ತಂಡಕ್ಕೆ ಸಿಕ್ಕ ಡೈರಿಯಲ್ಲಿ ಪರಶುರಾಮ್‌ ಅವರು ಬರೆದಿರುವ ಎನ್ನಲಾದ ಹಣಕಾಸಿನ ಲೆಕ್ಕಾಚಾರಗಳು ತನಿಖೆಗೆ ಹೊಸ ಆಯಾಮ ಮೂಡಿಸಲಿದೆ ಎನ್ನಲಾಗಿದೆ.

ಡೈರಿಯ ಒಂದಿಷ್ಟು ಪುಟಗಳಲ್ಲಿ ಹೆಸರುಗಳ ಸಮೇತ ಹಣದ ಲೆಕ್ಕಾಚಾರ ಬರೆದಿಟ್ಟಿದ್ದರೆ, ಇನ್ನೊಂದೆಡೆ ಹೆಸರುಗಳಿಲ್ಲದೆ ಲೆಕ್ಕಗಳನ್ನು ಬರೆದಿಟ್ಟಿರುವುದು ಕಂಡುಬಂದಿದೆ. ಬೇರೆ ಏನು ಬರೆದಿದ್ದಾರೆ ಎಂದು ನೋಡಬೇಕೆನ್ನುವಷ್ಟರಲ್ಲಿ, ಅದನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದರು ಎಂದು "ಕನ್ನಡಪ್ರಭ "ಕ್ಕೆ ಪರಶುರಾಮ್‌ ಸಹೋದರ ಹನುಮಂತ ಮಾಹಿತಿ ನೀಡಿದ್ದಾರೆ.

ಆ.8ರಂದು ಸಿಐಡಿ ಅಧಿಕಾರಿಗಳ ತಂಡ ಯಾದಗಿರಿ ಎಸ್‌ಪಿ ನಿವಾಸದ ಸಮೀಪದಲ್ಲಿರುವ ಪೊಲೀಸ್‌ ವಸತಿ ನಿಲಯದಲ್ಲಿರುವ ಪರಶುರಾಮ್‌ ಮನೆಗೆ ಸ್ಥಳ ಪರಿಶೀಲನೆ ಮಹಜರಿಗೆಂದು ತೆರಳಿತ್ತು. ಈ ವೇಳೆ ಅವರ ತಂದೆ, ಸಹೋದರ, ಮಾವ ಹಾಗೂ ಸ್ನೇಹಿತರು ಜೊತೆಯಲ್ಲಿದ್ದರು.

ಆಗ 7.33 ಲಕ್ಷ ರು.ನಗದು ಹಣ, ಶಾಸಕ ಚೆನ್ನಾರೆಡ್ಡಿ ತುನ್ನೂರು ಅವರ ಹೆಸರಿನ ಖಾಲಿ ಲೆಟರ್‌ ಹೆಡ್‌, 6 ಲಕ್ಷ ರು.ಹಣ ಬ್ಯಾಂಕಿಗೆ ಜಮೆ ಮಾಡಿದ ಬಗ್ಗೆ ರಸೀದಿಗಳು, ಇಲಾಖೆ ರಿವಾಲ್ವರ್‌, ವಾಕಿಟಾಕಿ ಸ್ಥಳದಲ್ಲಿ ಕಂಡುಬಂದಾಗ, ಸಿಐಡಿ ಅಧಿಕಾರಿಗಳು ಅವುಗಳನ್ನು ತಮ್ಮ ವಶಕ್ಕೆ ಪಡೆದು ಜೊತೆಗೆ ಕೆಂಪು ಡೈರಿಯನ್ನೂ ಸಹ ತೆಗೆದುಕೊಂಡು ಹೋದರು. ಪರಶುರಾಮ್‌ ಅವರು ಎಂದಿನಂತೆ ದೈನಂದಿನ ವಿಷಯಗಳು ಹಾಗೂ ಹಣಕಾಸಿನ ಲೆಕ್ಕಾಚಾರಗಳನ್ನು ಡೈರಿಯಲ್ಲಿ ಬರೆದಿಡುತ್ತಿದ್ದರು. ಇದರ ಬಹಳಷ್ಟು ಕಡೆಗಳಲ್ಲಿ ಲೆಕ್ಕಾಚಾರದ ಬಗ್ಗೆ ಬರೆದಿರುವುದು ಕಂಡು ಬಂದಿದೆ. ಒಂದು ವೇಳೆ, ಈ ಮಾಹಿತಿಯ ಬಗ್ಗೆಯೂ ತನಿಖೆಯಾದಲ್ಲಿ ಅಕ್ರಮದ ಇನ್ನೂ ಹೆಚ್ಚಿನ ಮುಖವಾಡಗಳು ಬಯಲಾಗುವ ಸಾಧ್ಯತೆಗಳಿಗೆ ಎಂದು ಬಲ್ಲ ಮೂಲಗಳು "ಕನ್ನಡಪ್ರಭ "ಕ್ಕೆ ತಿಳಿಸಿವೆ.

ಕಲಬುರಗಿ ಕಚೇರಿ ಕಡೆ ಬೊಟ್ಟು: ಪಿಎಸ್‌ಐ ವರ್ಗಾವಣೆ ದಂಧೆಯ ಮೂಲವೇ ಕಲಬುರಗಿಯಲ್ಲಿರುವ ಇಲಾಖೆಯ ಹಿರಿಯ ಕಚೇರಿ ಎಂದು ಖಾಕಿಪಡೆಯಲ್ಲೀಗ ಚರ್ಚೆಗಳು ಹರಿದಾಡತೊಡಗಿವೆ. ಹಿರಿಯ ಅಧಿಕಾರಿಯೊಬ್ಬರ ದಲ್ಲಾಳಿಯಂತೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿಯೊಬ್ಬರು ಇವೆಲ್ಲವನ್ನೂ ನಿಭಾಯಿಸುತ್ತಾರೆ. ಸಚಿವ ಪ್ರಿಯಾಂಕ ಖರ್ಗೆ ತಮಗೆ ಆಪ್ತರು ಎಂದು ಎಲ್ಲೆಡೆ ತೋರಿಸಿಕೊಳ್ಳುವ ಆ ಅಧಿಕಾರಿ, ವರ್ಗಾವಣೆ ವಿಚಾರದಲ್ಲಿ ಮೂಗು ತೂರಿಸುತ್ತಾರೆ ಎಂಬ ಮಾತುಗಳು ಖಾಕಿಪಡೆಯಲ್ಲೇ ಪ್ರತಿಧ್ವನಿಸುತ್ತಿವೆ. ಪರಶುರಾಮ್ ಡೈರಿಯಲ್ಲಿ ಕಲಬುರಗಿ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸೈಬರ್‌ ವಂಚನೆಗೆ ನಕಲಿ ಬ್ಯಾಂಕ್‌ ಖಾತೆ ಪೂರೈಸುತ್ತಿದ್ದ 13 ಜನ ಸೆರೆ
ಬಿಹಾರದಲ್ಲಿ ತುಮಕೂರಿನ ಒಂದೇ ಕುಟುಂಬದ ನಾಲ್ವರ ಸಾವು