ಬೆಂಗಳೂರು : ಸ್ನೇಹಿತೆ ವಿಚಾರಕ್ಕೆ ಜಗಳ - ಹುಟ್ಟುಹಬ್ಬದ ದಿನವೇ ಬಾಲ್ಯದ ಗೆಳೆಯನ ಕೊಲೆ

KannadaprabhaNewsNetwork |  
Published : Sep 22, 2024, 01:56 AM ISTUpdated : Sep 22, 2024, 04:39 AM IST
UP murder crime news

ಸಾರಾಂಶ

ಗೆಳೆಯನ ಮೇಲೆ ಮಾಟ ಮಂತ್ರ ಮಾಡಿದ್ದಾನೆ ಎಂಬ ಅನುಮಾನದಿಂದ ಸ್ನೇಹಿತನೊಬ್ಬ ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಈ ಘಟನೆ ಬೆಂಗಳೂರಿನ ಸಂಜಯನಗರದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

 ಬೆಂಗಳೂರು : ಮಾಟ ಮಂತ್ರ ಮಾಡಿ ಗೆಳೆತಿಯನ್ನು ಒಲಿಸಿಕೊಂಡಿದ್ದಾನೆ ಎಂದು ಸಿಟ್ಟಿಗೆದ್ದು ತನ್ನ ಬಾಲ್ಯದ ಗೆಳೆಯನನ್ನು ಹುಟ್ಟುಹಬ್ಬದ ದಿನವೇ ಸಿಮೆಂಟ್‌ ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಗೆದ್ದಲಹಳ್ಳಿ ನಿವಾಸಿ ವರುಣ್ ಕೋಟ್ಯಾನ್‌ (24) ಹತ್ಯೆಯಾದ ದುರ್ದೈವಿ. ಈ ಕೊಲೆ ಕೃತ್ಯ ಎಸಗಿದ ಸ್ನೇಹಿತ ದಿವೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವರುಣ್ ಹುಟ್ಟುಹಬ್ಬದ ನಿಮಿತ್ತ ಆತನ ಮನೆಗೆ ಶುಕ್ರವಾರ ರಾತ್ರಿ ಬಂದಿದ್ದ ದಿವೇಶ್‌, ರಾತ್ರಿ ಪಾರ್ಟಿ ಬಳಿಕ ಗೆಳೆಯನ ಮನೆಯಲ್ಲೇ ಇದ್ದ. ಆಗ ಗೆಳತಿ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉಡುಪಿ ಜಿಲ್ಲೆ ಕುತ್ಪಡಿ ಗ್ರಾಮದ ವರುಣ್ ಕೋಟ್ಯಾನ್ ಹಾಗೂ ಆರೋಪಿ ದಿವೇಶ್ ಬಾಲ್ಯ ಸ್ನೇಹಿತರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಜಯನಗರ ಸಮೀಪದ ಗೆದ್ದಲಹಳ್ಳಿಯಲ್ಲಿ ವರುಣ್ ವಾಸವಾಗಿದ್ದ. ಈ ಗೆಳೆಯರಿಗೆ ಬಾಲ್ಯದ ಸ್ನೇಹಿತೆ ಇದ್ದು, ಕೆಲ ದಿನಗಳಿಂದ ವರುಣ್‌ ಜತೆ ಆಕೆ ಆತ್ಮೀಯವಾಗಿದ್ದಳು. ಈ ವಿಚಾರ ತಿಳಿದು ಗೆಳೆಯನ ಮೇಲೆ ದಿವೇಶ್ ಅಸಮಾಧಾನಗೊಂಡಿದ್ದ.

ವರುಣನ ಹುಟ್ಟಹಬ್ಬದ ಆಚರಣೆಗೆ ಶುಕ್ರವಾರ ರಾತ್ರಿ ಆತನ ಗೆಳತಿ, ದಿವೇಶ್ ಹಾಗೂ ದೀಕ್ಷಿತ್‌ ಮನೆಗೆ ಬಂದಿದ್ದರು. ಬಳಿಕ ಈ ನಾಲ್ವರು ಸ್ನೇಹಿತರು ಮನೆಯಿಂದ ಹೊರ ಹೋಗಿ ಬರ್ತ್‌ ಡೇ ಪಾರ್ಟಿ ಮುಗಿಸಿ ಮತ್ತೆ ವರುಣ್‌ ಮನೆಗೆ ಬಂದಿದ್ದರು. ಆಗ ರೂಮ್‌ನಲ್ಲಿ ಇವರ ಸ್ನೇಹಿತೆ ಮಲಗಿದರೆ, ಮತ್ತೊಂದು ರೂಮ್‌ನಲ್ಲಿ ಮೂವರು ಗೆಳೆಯರು ನಿದ್ರೆ ಜಾರಿದ್ದರು. ಆ ವೇಳೆ ಸ್ನೇಹಿತೆ ವಿಚಾರವಾಗಿ ವರುಣ್‌ ಮತ್ತು ದಿವೇಶ್ ಮಧ್ಯೆ ಜಗಳ ಶುರುವಾಗಿದೆ. 

ಕೊನೆಗೆ ಮತ್ತೊಬ್ಬ ಸ್ನೇಹಿತ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದ್ದ. ಮುಂಜಾನೆ ನಿದ್ರೆಯಿಂದ ಎದ್ದಾಗ ಮತ್ತೆ ವರುಣ್ ಹಾಗೂ ದಿವೇಶ್ ಮಧ್ಯೆ ಜಗಳ ಆರಂಭವಾಗಿದೆ. ನೀನು ಮಾಟ ಮಂತ್ರ ಮಾಡಿ ಆಕೆಯನ್ನು ವಶೀಕರಣ ಮಾಡಿಕೊಂಡಿದ್ದೀಯಾ ಎಂದು ದಿವೇಶ್ ಕೂಗಾಡಿದ್ದಾನೆ. ಆಗ ತಳ್ಳಾಟ ನೂಕಾಟ ಮಾಡಿಕೊಂಡು ಮನೆಯಿಂದ ಇಬ್ಬರು ಹೊರಗೆ ಬಂದಿದ್ದಾರೆ. ಈ ಹಂತದಲ್ಲಿ ಸಿಟ್ಟಿಗೆದ್ದ ದಿವೇಶ್‌, ಮನೆ ಮುಂದೆ ಬಿದ್ದಿದ್ದ ಸಿಮೆಂಟ್‌ ಇಟ್ಟಿಗೆ ತೆಗೆದುಕೊಂಡು ವರುಣ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ವರುಣ್ ಕೊನೆಯುಸಿರೆಳೆದಿದ್ದಾನೆ. ಹತ್ಯೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ದಿವೇಶ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಹತ್ಯೆವೇಳೆ ಮನೆಯಲ್ಲೇ ಇದ್ದ ಗೆಳತಿ

ತನ್ನ ಸ್ನೇಹದ ವಿಚಾರವಾಗಿ ಬಾಲ್ಯದ ಗೆಳೆಯರು ಪರಸ್ಪರ ಬಡಿದಾಡಿಕೊಳ್ಳುವ ವೇಳೆ ಅದೇ ಮನೆಯಲ್ಲಿ ಸ್ನೇಹಿತೆ ನಿದ್ರೆ ಮಾಡುತ್ತಿದ್ದಳು. ಹತ್ಯೆ ವಿಚಾರ ತಿಳಿದ ಕೂಡಲೇ ಭೀತಿಗೊಂಡು ಆಕೆ ತನ್ನ ಮನೆಗೆ ತೆರಳಿದ್ದಳು. ಬಳಿಕ ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ನಿರ್ದೋಷಿ ಎಂಬುದು ಗೊತ್ತಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಿಯಂತ್ರಣ ತಪ್ಪಿ ಬೈಕ್ ಸವಾರ ದುರ್ಮರಣ
ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು