ಬೆಂಗಳೂರಿನ ಮನೆಯಲ್ಲಿ ಒಂಟಿ ಮಹಿಳೆಯ ಬರ್ಬರ ಕೊಲೆ : ಫ್ರಿಜ್ಜಲ್ಲಿ ಶವದ 30 ಪೀಸ್‌ ಪತ್ತೆ!

KannadaprabhaNewsNetwork | Updated : Sep 22 2024, 04:45 AM IST

ಸಾರಾಂಶ

ಬೆಂಗಳೂರಿನಲ್ಲಿ ಒಂಟಿ ಮಹಿಳೆಯನ್ನು ಕೊಲೆಗೈದು ಮೃತದೇಹವನ್ನು 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇಡಲಾಗಿದೆ. ಜಾರ್ಖಂಡ್ ಮೂಲದ ಮಹಾಲಕ್ಷ್ಮಿ ಎಂದು ಗುರುತಿಸಲಾದ ಈಕೆಯನ್ನು ಸುಮಾರು 11 ದಿನಗಳ ಹಿಂದೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

  ಬೆಂಗಳೂರು :  ಎರಡು ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್‌ ಬರ್ಬರ ಕೊಲೆ ಪ್ರಕರಣದ ಮಾದರಿಯಲ್ಲೇ ಬೆಂಗಳೂರಿನ ಮನೆಯೊಂದರಲ್ಲಿ ಒಂಟಿ ಮಹಿಳೆಯನ್ನು ಕೊಲೆಗೈದು ಬಳಿಕ ಮೃತದೇಹವನ್ನು 30ಕ್ಕೂ ಅಧಿಕ ತುಂಡು ಮಾಡಿ ಫ್ರಿಜ್‌ನಲ್ಲಿ ತುಂಬಿರುವ ಭೀಭತ್ಸ ಘಟನೆ ನಡೆದಿದೆ.

ಭೀಕರವಾಗಿ ಕೊಲೆಯಾಗಿರುವ ಮಹಿಳೆಯನ್ನು ಜಾರ್ಖಂಡ್‌ ಮೂಲದ ಮಹಾಲಕ್ಷ್ಮಿ(29) ಎಂದು ಗುರುತಿಸಲಾಗಿದೆ. ವೈಯಾಲಿಕಾವಲ್‌ನ ಪೈಪ್‌ಲೈನ್‌ ರಸ್ತೆಯ ವೀರಣ್ಣ ಆಶ್ರಮದ ಬಳಿಯ ಮೂರು ಅಂತಸ್ತಿನ ಕಟ್ಟಡದ ಮೊದಲ ಮಹಡಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಯಾವಾಗ ಕೊಲೆಯಾಗಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಸುಮಾರು 11 ದಿನಗಳ ಹಿಂದೆ ಕೊಲೆಯಾಗಿರುವ ಸಾಧ್ಯತೆಯಿದ್ದು, ಶನಿವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ತುಂಡು ಮಾಡಿ 165 ಲೀಟರ್‌ ಸಾಮರ್ಥ್ಯದ ಫ್ರಿಜ್‌ಗೆ ತುಂಬಲಾಗಿದೆ.ಮಹಿಳೆಯ ಈ ಬರ್ಬರ ಕೊಲೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಹಂತಕನ ಸುಳಿವೂ ಸಿಕ್ಕಿಲ್ಲ. ಘಟನೆ ಸಂಬಂಧ ಪೊಲೀಸರು ಮೃತಳ ಪತಿ ಹಿಮಾನ್‌ ದಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಮನೆಯಲ್ಲಿ ದುರ್ನಾತ: ಮಹಾಲಕ್ಷ್ಮಿ ನೆಲೆಸಿದ್ದ ಮನೆಯಿಂದ ಕಳೆದ ಎರಡು ದಿನಗಳಿಂದ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ನೆರೆಮನೆ ಮಹಿಳೆಯೊಬ್ಬರು ಶನಿವಾರ ಮಧ್ಯಾಹ್ನ ಮನೆಯ ಬಾಗಿಲು ತೆರೆದು ನೋಡಿದಾಗ ಫ್ರಿಜ್‌ನಿಂದ ಕಲುಷಿತ ನೀರು ಮಾದರಿಯ ದ್ರಾವಣ ಹರಿದು ಬರುತ್ತಿರುವುದು ಕಂಡುಬಂದಿದೆ. ಬಳಿಕ ಫ್ರಿಜ್‌ ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ದುರ್ನಾತ ಹಾಗೂ ಆ ಮಾಂಸದ ತುಂಡುಗಳಿಂದ ಹುಳುಗಳು ಹೊರಬರುತ್ತಿರುವುದನ್ನು ಕಂಡ ಆ ಮಹಿಳೆ ಅರೆ ಕ್ಷಣ ಹೌಹಾರಿದ್ದಾರೆ. ಬಳಿಕ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ವೈಯಾಲಿಕಾವಲ್‌ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸಂಬಂಧಿಕರು ಬಂದ ಬಳಿಕ ಗುರುತು ಪತ್ತೆ:

ಪೊಲೀಸರ ಪರಿಶೀಲನೆ ವೇಳೆ ಫ್ರಿಜ್‌ನಲ್ಲಿ ತುಂಬಿದ್ದ ಆ ಮಾಂಸದ ತುಂಡಗಳು ಯಾವುದೋ ವ್ಯಕ್ತಿಯದೇ ಇರಬಹುದು ಎಂಬ ಅನುಮಾನ ಬಂದಿದೆ. ಬಳಿಕ ನೆರೆಹೊರೆಯವರ ವಿಚಾರಣೆ ಮಾಡಿದಾಗ ಮಹಿಳೆಯೊಬ್ಬರು ಈ ಮನೆಯಲ್ಲಿ ನೆಲೆಸಿದ್ದ ವಿಚಾರ ಗೊತ್ತಾಗಿದೆ. ಬಳಿಕ ಆಕೆಯ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಮೃತಳ ತಾಯಿ ಮತ್ತು ಸಹೋದರಿ ಘಟನಾ ಸ್ಥಳಕ್ಕೆ ಬಂದು ನೋಡಿದಾಗ ಕೊಲೆಯಾಗಿರುವ ವ್ಯಕ್ತಿ ಮಹಾಲಕ್ಷ್ಮಿ ಎಂಬುದು ಪತ್ತೆಯಾಗಿದೆ.

ಕೊಳೆತ ಸ್ಥಿತಿಯ ಮೃತದೇಹದ ಮಾಂಸದ ತುಂಡುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪತಿಯಿಂದ ಬೇರ್ಪಟ್ಟಿದ್ದ ಮಹಾಲಕ್ಷ್ಮಿ:ಕೊಲೆಯಾದ ಮಹಾಲಕ್ಷ್ಮಿಗೆ 5 ವರ್ಷದ ಹಿಂದೆ ವಿವಾಹ ಆಗಿತ್ತು. ಪತಿ ನೆಲಮಂಗಲದಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದರು. ಕಲಹದ ಹಿನ್ನೆಲೆಯಲ್ಲಿ 8 ತಿಂಗಳ ಹಿಂದೆ ಮಹಾಲಕ್ಷ್ಮಿ ಪತಿಯನ್ನು ತೊರೆದಿದ್ದಳು. 4 ವರ್ಷದ ಮಗು ತಂದೆಯ ಬಳಿ ಇತ್ತು. ಮಹಾಲಕ್ಷ್ಮಿ ಮಾಲ್‌ವೊಂದರಲ್ಲಿ ಸೇಲ್ಸ್‌ ಗರ್ಲ್‌ ಆಗಿದ್ದಳು. 3 ತಿಂಗಳಿಂದ ವೈಯಾಲಿ ಕಾವಲ್‌ನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದಳು. ನಿತ್ಯ ಆಕೆಯನ್ನು ಯುವಕನೊಬ್ಬ ಪಿಕ್‌ಅಪ್‌- ಡ್ರಾಪ್‌ ಮಾಡುತ್ತಿದ್ದ. ಮಹಾಲಕ್ಷ್ಮಿ ಬಳಸುತ್ತಿದ್ದ ಮೊಬೈಲ್‌ ಫೋನ್‌ ಕೊನೆಯದಾಗಿ ಸೆ.12ರ ಸಂಜೆ ಸ್ವಿಚ್ಡ್‌ ಆಫ್‌ ಆಗಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ.

Share this article