ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಸ್ಥಾನದಿಂದ ವಿಮಾನದಲ್ಲಿ ಬಂದು ಪಿಜಿಗಳಲ್ಲಿ ದುಬಾರಿ ಮೌಲ್ಯದ ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಬಿ.ಟೆಕ್ ಪದವೀಧರೆಯೊಬ್ಬಳು ಈಗ ಎಚ್‌ಎಎಲ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾಳೆ.
ರಾಜಸ್ಥಾನ ಮೂಲದ ಜಸು ಅಗರ್ವಾಲ್ ಬಂಧಿತಳಾಗಿದ್ದು, ಆರೋಪಿಯಿಂದ 10 ಲಕ್ಷ ರು ಮೌಲ್ಯದ ವಿವಿಧ ಕಂಪನಿಗಳ 24 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿಗೆ ಎಚ್‌ಎಎಲ್ ವ್ಯಾಪ್ತಿ ಪಿಜಿಯಲ್ಲಿ ನಡೆದಿದ್ದ ಲ್ಯಾಪ್‌ಟಾಪ್ ಕಳ್ಳತನ ಕೃತ್ಯದಲ್ಲಿ ಮಹಿಳೆ ಪಾತ್ರ ಪತ್ತೆಯಾಗಿತ್ತು.
ಈ ಕೃತ್ಯದ ತನಿಖೆಗಿಳಿದಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸಮೀಪ ಹೋಟೆಲ್‌ನಲ್ಲಿ ಆಕೆ ತಂಗಿರುವ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಶೋಕಿಗೆ ಲ್ಯಾಪ್‌ಟಾಪ್ ಕಳ್ಳಿಯಾದ್ಲು: ರಾಜಸ್ಥಾನದ ಜಸು ಅಗರ್ವಾಲ್ ಬಿ.ಟೆಕ್ ಪದವೀಧರಳಾಗಿದ್ದು, ದೆಹಲಿ ಗಡಿ ಸಮೀಪದಲ್ಲಿರುವ ತನ್ನೂರಿನಲ್ಲಿ ಆಕೆ ವಾಸವಾಗಿದ್ದಳು. ಈ ಮೊದಲು ದೆಹಲಿಯಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಆಕೆ ಉದ್ಯೋಗದಲ್ಲಿದ್ದ ಜಸು, ಮೋಜಿನ ಜೀವನಕ್ಕಾಗಿ ಲ್ಯಾಪ್‌ಟಾಪ್ ಕಳ್ಳಿಯಾದಳು.
ಕೆಲ ತಿಂಗಳ ಹಿಂದೆ ನಗರಕ್ಕೆ ಖಾಸಗಿ ಕಂಪನಿಯೊಂದರ ಸಂದರ್ಶನಕ್ಕೆ ಬಂದಿದ್ದ ಆಕೆ, ಆ ವೇಳೆ ಒಂದು ಲ್ಯಾಪ್ ಟಾಪ್ ಕದ್ದು ಮಾರಾಟ ಮಾಡಿ ಹಣ ಗಳಿಸಿದ್ದಳು.
ಹೀಗೆ ಸುಲಭವಾಗಿ ಹಣ ಸಿಕ್ಕಿದ್ದರಿಂದ ಲ್ಯಾಪ್ ಟಾಪ್‌ಗಳನ್ನು ಕದಿಯುವುದನ್ನೇ ಜಸು ವೃತ್ತಿಯಾಗಿಸಿಕೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂತೆಯೇ ತನ್ನೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಜಸು, ಬಳಿಕ ಹೋಟೆಲ್ ಅಥವಾ ಪಿಜಿಗಳಲ್ಲಿ ಏಳೆಂಟು ದಿನಗಳು ತಂಗುತ್ತಿದ್ದಳು.
ಅದರಲ್ಲೂ ಸಾಫ್ಟ್‌ವೇರ್ ಕಂಪನಿಗಳು ಹಾಗೂ ಪಿಜಿಗಳ ಬಾಹುಳ್ಯವಿರುವ ಟಿನ್ ಪ್ಯಾಕ್ಟರಿ, ಮಾರತ್‌ಹಳ್ಳಿ, ಬೆಳ್ಳಂದೂರು, ಸಿಲ್ಕ್ ಬೋರ್ಡ್, ಹೆಬ್ಬಾಳ, ವೈಟ್‌ಫೀಲ್ಡ್ ಹಾಗೂ ಮಹದೇವಪುರ ಕಡೆಯೇ ಆಕೆ ವಾಸ್ತವ್ಯ ಹೂಡುತ್ತಿದ್ದಳು.
ಆಗ ಪಿಜಿಗಳನ್ನು ಗುರುತಿಸಿ ಟೀ ಹಾಗೂ ಊಟದ ಸಮಯದಲ್ಲಿ ಆ ಪಿಜಿಗಳಿಗೆ ನುಗ್ಗಿ ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದಳು. ಒಮ್ಮೆ ಬಂದರೆ 10 ರಿಂದ 15 ಲ್ಯಾಪ್‌ಟಾಪ್‌ಗಳನ್ನು ಆಕೆ ಕಳವು ಮಾಡಿ ಮರಳುತ್ತಿದ್ದಳು.
ಈ ಕಳವು ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಸೆರೆಯಾಗಿದ್ದು ಹೇಗೆ?
ಇತ್ತೀಚಿಗೆ ಕೋರಮಂಗಲ, ಇಂದಿರಾನಗರ ಹಾಗೂ ಎಚ್‌ಎಲ್‌ಎ ಠಾಣೆಗಳ ವ್ಯಾಪ್ತಿ 4 ಪಿಜಿಗಳಲ್ಲಿ ದುಬಾರಿ ಮೌಲ್ಯದ ಲ್ಯಾಪ್‌ಟಾಪ್‌ಗಳು ಕಳ್ಳತನವಾಗಿದ್ದವು.
ಎಚ್‌ಎಎಲ್ ಪಿಜಿಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯಲ್ಲಿ ಪತ್ತೆಯಾದ ಮಹಿಳೆಗೂ ಇತರೆ ಪಿಜಿಗಳ ಕಳ್ಳತನ ಕೃತ್ಯದ ಮಹಿಳೆಗೂ ಸಾಮ್ಯತೆ ಕಂಡು ಬಂದಿತು.
ಹೀಗಾಗಿ ಪಿಜಿಗಳನ್ನೇ ಗುರಿಯಾಗಿಸಿ ಮಹಿಳೆಯೊಬ್ಬಳು ಲ್ಯಾಪ್‌ಟಾಪ್ ಕಳ್ಳತನದಲ್ಲಿ ತೊಡಗಿರುವುದು ಖಚಿತವಾಯಿತು. ಈ ಮಾಹಿತಿ ಆಧರಿಸಿ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಶಂಕಿತ ಮಹಿಳೆಯು ಕೆಐಎ ರಸ್ತೆಯ ಹೋಟೆಲ್‌ನಲ್ಲಿ ತಂಗಿರುವ ಸಂಗತಿ ತಿಳಿಯಿತು.
ಆಗ ಹಿಂದಿನ ದಿನವಷ್ಟೇ ತನ್ನೂರಿನಿಂದ ಲ್ಯಾಪ್‌ಟಾಪ್ ಕಳ್ಳತನಕ್ಕಾಗಿ ನಗರಕ್ಕೆ ಬಂದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.