ನಿರ್ಮಾಣ ಹಂತದಲ್ಲಿದ್ದ ಮಹಾದ್ವಾರ ಕುಸಿದುಬಿದ್ದು ಕೂಲಿಕಾರ್ಮಿಕ ಸಾವು

KannadaprabhaNewsNetwork |  
Published : Jun 03, 2025, 12:18 AM ISTUpdated : Jun 03, 2025, 04:00 AM IST
2ಕೆಎಂಎನ್ ಡಿ26 | Kannada Prabha

ಸಾರಾಂಶ

ನಿರ್ಮಾಣ ಹಂತದಲ್ಲಿದ್ದ ಮಹಾದ್ವಾರ ಕುಸಿದುಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಕೂಲಿ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿ ನಾಲ್ಕು ಜನ ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ದೇವರಹಳ್ಳಿ ಶ್ರೀ ತಪಸೀರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

  ನಾಗಮಂಗಲ : ನಿರ್ಮಾಣ ಹಂತದಲ್ಲಿದ್ದ ಮಹಾದ್ವಾರ ಕುಸಿದುಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಕೂಲಿ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿ ನಾಲ್ಕು ಜನ ಗಾಯಗೊಂಡಿರುವ ಘಟನೆ ತಾಲೂಕಿನ ದೇವರಹಳ್ಳಿ ಶ್ರೀ ತಪಸೀರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಕಲಬುರಗಿ ಜಿಲ್ಲೆಯ ಶರಣ್ (27) ಸಾವನ್ನಪ್ಪಿರುವ ನತದೃಷ್ಟ ಕೂಲಿ ಕಾರ್ಮಿಕ. ಗಾಯಾಳುಗಳ ಹೆಸರು ತಿಳಿದುಬಂದಿಲ್ಲ.

ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀತಪಸೀರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ದಾನಿಗಳ ನೆರವಿನಿಂದ 20 ಅಡಿ ಎತ್ತರ 35 ಅಡಿ ಉದ್ದದ ಮಹಾದ್ವಾರ ನಿರ್ಮಾಣ ಮಾಡಿಸಲಾಗುತ್ತಿತ್ತು. ಮಹಾದ್ವಾರದ ಮೇಲ್ಚಾವಣಿಗೆ ಕಾಂಕ್ರೀಟ್ ಹಾಕುವ ಸಲುವಾಗಿ ಸೆಂಟ್ರಿಗ್ ಹೊಡೆದು ಕಬ್ಬಿಣ ಕಟ್ಟಿ ಸೋಮವಾರ ಮಧ್ಯಾಹ್ನ ಕಾಂಕ್ರೀಟ್ ಹಾಕುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸೆಂಟ್ರಿಂಗ್ ಮರಗಳನ್ನು ಸರಿಯಾಗಿ ಲಾಕ್ ಮಾಡದಿರುವುದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.

ಸೆಂಟ್ರಿಂಗ್ ಸಹಿತ ನಿರ್ಮಾಣ ಹಂತದಲ್ಲಿದ್ದ ಮಹಾದ್ವಾರ ದಿಢೀರನೇ ಕುಸಿದ ಪರಿಣಾಮ ಕಾಂಕ್ರೀಟ್ ಹಾಕುತ್ತಿದ್ದ ನಾಲ್ಕು ಮಂದಿ ಕೂಲಿ ಕಾರ್ಮಿಕರು ಕಬ್ಬಿಣದ ಸರಳು ಮತ್ತು ಸೆಂಟ್ರಿಂಗ್ ಮಧ್ಯೆ ಸಿಲುಕಿ ಗಾಯಗೊಂಡರೆ, ಶರಣ್ ಹೊರಬರಲಾರದೆ ಗಂಭೀರವಾಗಿ ಗಾಯಗೊಂಡಿದ್ದನು.

ಬಳಿಕ ಜೆಸಿಬಿ ಯಂತ್ರದ ಮೂಲಕ ಸಿಲುಕಿಕೊಂಡಿದ್ದ ಶರಣ್‌ನನ್ನು ಹೊರತೆಗೆದು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ನಾಲ್ವರು ಗಾಯಾಳುಗಳ ಪೈಕಿ ಒಬ್ಬ ಕೂಲಿ ಕಾರ್ಮಿಕನಿಗೆ ಕಾಲು ಮುರಿದಿದ್ದು ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸುದ್ದಿ ತಿಳಿಯುತ್ತಿದ್ದಂತೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು. ಶರಣ್ ಮೃತದೇಹವನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಮೃತ ಶರಣ್ ವಾರಸುದಾರರು ದೂರದ ಕಲಬುರಗಿ ಜಿಲ್ಲೆಯಿಂದ ಬಂದ ನಂತರ ಮಂಗಳವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದುಬಂದಿದೆ.

PREV
Read more Articles on

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!