ಕೆ.ಆರ್.ಪೇಟೆ: ಗ್ರಾಪಂ ಸದಸ್ಯ ಕಚೇರಿ ಕಟ್ಟಡದ ಕಿಟಕಿಗೆ ನೇಣುಬಿಗಿದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ. ಗಂಜಿಗೆರೆ ಗ್ರಾಪಂ ವ್ಯಾಪ್ತಿಯ ಪೂವನಹಳ್ಳಿ ಗ್ರಾಪಂ ಸದಸ್ಯ ದೇವರಾಜೇಗೌಡ (65) ಬಿನ್ ಲೇಟ್ ದೊಡ್ಡಸ್ವಾಮೀಗೌಡ ನೇಣಿಗೆ ಶರಣಾಗಿರುವ ವ್ಯಕ್ತಿ. ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ತಡರಾತ್ರಿ ಹೊರಗೆ ಹೋಗಿದ್ದಾರೆ. ಮಂಗಳವಾರ ಬೆಳಗ್ಗೆ ಗ್ರಾಪಂ ನೌಕರರು ಕಚೇರಿ ಬೀಗ ತೆಗೆಯಲು ಆವರಣಕ್ಕೆ ಪ್ರವೇಶಿಸಿದಾಗ ದೇವರಾಜೇಗೌಡರ ಶವ ನೇಣುಬಿಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ಯಾರೋ ದುಷ್ಕರ್ಮಿಗಳು ಸಾಯಿಸಿ ನಂತರ ಅವರ ಶರ್ಟಿನಲ್ಲಿ ನೇಣುಬಿಗಿದು ಗ್ರಾಪಂ ಕಟ್ಟಡಕ್ಕೆ ತಂದು ಹಾಕಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನ ದಳ, ನಂತರ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ಮಾಡಲಾಗಿದೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ದೇವರಾಜೇಗೌಡರ ಸಾವಿನ ಬಗ್ಗೆ ಕುಟುಂಬಸ್ಥರು, ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಿಡಿಒ ರವಿಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದು ತಾಪಂ ಇಒ ಬಿ.ಎಸ್.ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.