ಬೆಂಗಳೂರು : ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಚಿನ್ನ ಮತ್ತು ವಜ್ರದಾಭರಣ ಕಳವು ಮಾಡಿದ್ದ ಅಪ್ರಾಪ್ತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರದ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು ಬಾಲ ನ್ಯಾಮಂಡಳಿ ಎದುರು ಹಾಜರುಪಡಿಸಲಾಗಿದೆ. ಈತನಿಂದ ₹8 ಲಕ್ಷ ಮೌಲ್ಯದ 83 ಗ್ರಾಂ ಚಿನ್ನ, ವಜ್ರದಾಭರಣ ಹಾಗೂ ₹49 ಸಾವಿರ ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜಯನಗರ 5ನೇ ‘ಟಿ’ ಬ್ಲಾಕ್ ನಿವಾಸಿ ದ್ವಾರಕನಾಥ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ದ್ವಾರಕನಾಥ್ ಮತ್ತು ಪತ್ನಿ ಹಿರಿಯ ನಾಗರಿಕರು. ಡೂಪ್ಲೆಕ್ಸ್ ಮನೆಯಲ್ಲಿ ವಾಸವಾಗಿದ್ದಾರೆ. ಏ.29ರಂದು ಮಧ್ಯಾಹ್ನ 12.30ಕ್ಕೆ ದಂಪತಿ ಬಿಸಿಲ ತಾಪ ತಾಳಲಾರದೆ ಮೊದಲ ಮಹಡಿಯಿಂದ ನೆಲಮಹಡಿಗೆ ಬಂದಿದ್ದಾರೆ. ಈ ವೇಳೆ ಮೊದಲ ಮಹಡಿಯ ಮೆಟ್ಟಿಲಿನ ಬಳಿ ಇರುವ ಬಾಗಿಲು ಹಾಕಿರಲಿಲ್ಲ. ಇದನ್ನು ಗಮನಿಸಿರುವ ಆರೋಪಿಯು ಹಾಡಹಗಲೇ ಮೆಟ್ಟಿಲ ಬಳಿಯ ಬಾಗಿಲ ಮುಖಾಂತರ ಮೊದಲ ಮಹಡಿ ಪ್ರವೇಶಿಸಿ ಕೊಠಡಿಯಲ್ಲಿದ್ದ ಬೀರುವಿನ ಕೀ ತೆಗೆದುಕೊಂಡು ನಗದು, ಚಿನ್ನ ಹಾಗೂ ವಜ್ರದಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ.
ಅದೇ ದಿನ ದ್ವಾರಕನಾಥ್ ಸಂಜೆ 4 ಗಂಟೆಗೆ ಮೊದಲ ಮಹಡಿಗೆ ತೆರಳಿ ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮನೆಗಳವು ಮಾತ್ರವಲ್ಲದೆ, ಗಿರಿನಗರ ಮತ್ತು ಬನಶಂಕರಿ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.