ಏಳನೇ ಮಗುವಿಗೆ ಜನ್ಮ ನೀಡಿ ಆಸ್ಪತ್ರೆಯಲ್ಲೇ ಬಿಟ್ಟುಹೋದ ತಾಯಿ..!

KannadaprabhaNewsNetwork |  
Published : Feb 28, 2024, 02:33 AM IST
ಮಗುವಿಗೆ ಜನ್ಮ  | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬನ್ನಮ್ಮ ಮಗುವನ್ನು ಬಿಟ್ಟುಹೋಗಿರುವ ತಾಯಿಯಾಗಿದ್ದಾಳೆ. ಈಕೆ ಹೆರಿಗೆಗಾಗಿ ಆಸ್ಪತ್ರೆಗೆ ಫೆ.೨೩ರಂದು ದಾಖಲಾಗಿದ್ದಳು. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಈಕೆ ಮಕ್ಕಳನ್ನು ಮಾರಾಟ ಮಾಡುವ ಕುರಿತಂತೆ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಏಳನೇ ಮಗುವಿಗೆ ಜನ್ಮ ನೀಡಿ ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ಪರಾರಿಯಾಗಿರುವ ಘಟನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಜರುಗಿದೆ.

ತಾಲೂಕಿನ ಹಾಡ್ಯ ಗ್ರಾಮದ ಬನ್ನಮ್ಮ ಮಗುವನ್ನು ಬಿಟ್ಟುಹೋಗಿರುವ ತಾಯಿಯಾಗಿದ್ದಾಳೆ. ಈಕೆ ಹೆರಿಗೆಗಾಗಿ ಆಸ್ಪತ್ರೆಗೆ ಫೆ.೨೩ರಂದು ದಾಖಲಾಗಿದ್ದಳು. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಈಕೆ ಮಕ್ಕಳನ್ನು ಮಾರಾಟ ಮಾಡುವ ಕುರಿತಂತೆ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು.

ನವಜಾತ ಶಿಶುವಿಗೆ ತಾಯಿಯ ಎದೆಹಾಲು ಅವಶ್ಯಕವಿದ್ದುದರಿಂದ ಹಾಗೂ ತಾಯಿಗೆ ರಕ್ತದ ಪ್ರಮಾಣ ಕಡಿಮೆ ಇದ್ದುದರಿಂದ ತಾಯಿ-ಮಗು ಇಬ್ಬರಿಗೂ ಚಿಕಿತ್ಸೆಯ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿದ್ದರು. ಅದರಂತೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಈಕೆ ಹೊರಗೆ ಎಲ್ಲಿಯೂ ಹೋಗದಂತೆ ಎಚ್ಚರದಿಂದ ನೋಡಿಕೊಳ್ಳುವಂತೆ ಹಾಗೂ ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಮಕ್ಕಳ ರಕ್ಷಣಾ ಘಟಕದ ಸದಸ್ಯರು ತಿಳಿಸಿದ್ದರು.

ಅಧಿಕಾರಿಗಳಿಗೆ ಹೆದರಿದ ೫ ದಿನದ ಅನಾರೋಗ್ಯ ಪೀಡಿತ ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಸೋಮವಾರ ಮುಂಜಾನೆ ೩ ಗಂಟೆ ಸಮಯದಲ್ಲಿ ತಾಯಿ ಬನ್ನಮ್ಮ ೫ ವರ್ಷದ ಮಗಳೊಂದಿಗೆ ಪರಾರಿಯಾಗಿದ್ದಾಳೆ. ಪ್ರಕರಣ ಸಂಬಂಧ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಕಿ ಎಸ್.ಎಂ.ಶೈಲಜಾ ದೂರು ನೀಡಿದ್ದಾರೆ.

ಈ ದೂರಿನನ್ವಯ ಬನ್ನಮ್ಮ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ ೩೧೭ ಹಾಗೂ ೭೫ ಮತ್ತು ಮಕ್ಕಳ ರಕ್ಷಣಾ ಕಾಯ್ದೆ ೨೦೧೫ರನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆಕೆಗಾಗಿ ಹುಡುಕಾಟ ನಡೆಸಲಾಗಿದೆ.ಒಂದು ಮಗು ಮಾರಾಟವಾಗಿರುವ ಶಂಕೆ

ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬನ್ನಮ್ಮ ಅವಳಿಗೆ ಆರು ಮಕ್ಕಳಿದ್ದಾರೆ. ಐದು ದಿನಗಳ ಹಿಂದೆ ಏಳನೇ ಮಗುವಿಗೆ ಜನ್ಮ ನೀಡಿದ್ದಳು. ಆಕೆಯ ಮಕ್ಕಳ ಬಗ್ಗೆ ವಿಚಾರಣೆ ನಡೆಸಿದ ಸಮಯದಲ್ಲಿ ಇಬ್ಬರು ಮಕ್ಕಳು ಚಾಮರಾಜನಗರದ ಆಶ್ರಮದಲ್ಲಿರುವುದಾಗಿ, ಒಂದು ಗಂಡು ಮಗು ತನ್ನ ತಂಗಿಯ ಮನೆಯಲ್ಲಿದ್ದು, ಮತ್ತೊಂದು ಮಗು ಅಪಘಾತದಲ್ಲಿ ಮೃತಪಟ್ಟಿದ್ದಾಗಿ ವಿವರಣೆ ನೀಡಿದ್ದಾಳೆ. ಮತ್ತೊಂದು ಹೆಣ್ಣು ಮಗು ತನ್ನ ಜೊತೆಯಲ್ಲಿಯೇ ಇರುವುದಾಗಿ ಮಾಹಿತಿ ನೀಡಿದ್ದಳು. ಆದರೆ, ಮತ್ತೊಂದು ಮಗುವಿನ ಬಗ್ಗೆ ಸರಿಯಾದ ಮಾಹಿತಿಯನ್ನು ಬನ್ನಮ್ಮ ನೀಡಿಲ್ಲ. ಆ ಮಗು ಮಾರಾಟವಾಗಿರಬಹುದೆಂಬ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.

ಈಕೆಯ ಪತಿ ರಾಜು ಎಂಬಾತ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿರುವುದಾಗಿ ಬನ್ನಮ್ಮ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ತಿಳಿಸಿದ್ದು, ಈ ಮಗುವಿನ ತಂದೆ ಯಾರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬನ್ನಮ್ಮ ಸಿಕ್ಕ ಬಳಿಕವಷ್ಟೇ ಈ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು