ಕನ್ನಡಪ್ರಭ ವಾರ್ತೆ ಬೆಂಗಳೂರು
ಜಯನಗರ ನಿವಾಸಿ ಡಾಕಪ್ಪ(71) ಮೃತ ವಕೀಲ. ಸೋಮವಾರ ರಾತ್ರಿ 8.30ರ ಸುಮಾರಿಗೆ ಕೃಷ್ಣರಾವ್ ಪಾರ್ಕ್ ಬಳಿ ನಡೆದುಕೊಂಡು ಬರುವಾಗ ಈ ಅಪಘಾತ ಸಂಭವಿಸಿದೆ.
ವಕೀಲ ಡಾಕಪ್ಪ ಅವರು ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ಸೋಮವಾರ ಬೆಳಗ್ಗೆ ಕಾರಿನಲ್ಲಿ ಕಚೇರಿಗೆ ಬಂದಿದ್ದರು. ಕೃಷ್ಣರಾವ್ ಪಾರ್ಕ್ ಬಳಿ ಕಾರನ್ನು ನಿಲುಗಡೆ ಮಾಡಿದ್ದರು. ಕೆಲಸ ಮುಗಿಸಿ ಮನೆಗೆ ತೆರಳಲು ರಾತ್ರಿ 8.30ರ ಸುಮಾರಿಗೆ ಕಾರಿನ ಬಳಿಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಡಿ.ಎಂ.ಸರ್ಕಲ್ ಕಡೆಯಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಡಾಕಪ್ಪ ಅವರಿಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಡಾಕಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ನೆರವಿಗೆ ಧಾವಿಸಿದ ಸ್ಥಳೀಯರು, ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮಂಗಳವಾರ ಮುಂಜಾನೆ 2.50ರ ಸುಮಾರಿಗೆ ಮೃತಪಟ್ಟಿದ್ದಾರೆ.