ಮಕ್ಕಳಿಬ್ಬರನ್ನು ಕೊಂದಿದ್ದ ತಾಯಿ ಜೈಲಿನ ಶೌಚಾಲಯದಲ್ಲಿ ನೇಣಿಗೆ ಶರಣು

KannadaprabhaNewsNetwork | Updated : Apr 14 2024, 05:54 AM IST

ಸಾರಾಂಶ

ಯುಗಾದಿ ಹಬ್ಬದ ದಿನದಂದು ಮಕ್ಕಳಿಗೆ ಹಬ್ಬದೂಟ ಮಾಡಿಸಿ ಅವರನ್ನು ಉಸಿರು ಗಟ್ಟಿಸಿ ಕೊಂದಿದ್ದ ತಾಯಿ, ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದ್ದಾಳೆ.

 ಬೆಂಗಳೂರು:  ಯುಗಾದಿ ಹಬ್ಬದ ದಿನವೇ ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು ಬಂಧನಕ್ಕೆ ಒಳಗಾಗಿದ್ದ ತಾಯಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜಾಲಹಳ್ಳಿ ಭೋವಿ ಕಾಲೋನಿಯ ಗಂಗಾದೇವಿ (30) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ(ಏ.11) ರಾತ್ರಿ ಸುಮಾರು 9.30ಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಶೌಚಾಲಯಕ್ಕೆ ತೆರಳಿದ್ದ ಗಂಗಾದೇವಿ, ವೇಲ್‌ನಿಂದ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತದೇಹ ನೋಡಿದ್ದ ಸಹ ಕೈದಿಗಳು ಜೈಲಿನ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಸುದ್ದಿ ತಿಳಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಜೈಲಿಗೆ ತೆರಳಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರು. ನಿಯಮಾನುಸಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತಿ ಜೈಲಿನಲ್ಲೇ ಇದ್ದಾನೆ:

ಆಂಧ್ರಪ್ರದೇಶ ಮೂಲದ ಗಂಗಾದೇವಿ ಮತ್ತು ನರೇಶ್ 10 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಲಕ್ಷ್ಮಿ(7) ಮತ್ತು ಗೌತಮ್‌ (9) ಮಕ್ಕಳಿದ್ದರು. ನರೇಶ್‌ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆಗಾಗ ಜಗಳವಾಗುತ್ತಿತ್ತು. ಕೌಟುಂಬಿಕ ಕಲಹದಿಂದ ಬೇಸತ್ತು ಕೆಲ ತಿಂಗಳಿಂದ ಇಬ್ಬರು ಪ್ರತ್ಯೇಕವಾಗಿ ನೆಲೆಸಿದ್ದರು.

ಇತ್ತೀಚೆಗೆ ಪತಿ ನರೇಶ್‌, ಪುತ್ರಿಯ ಜತೆಗೆ ಅಸಭ್ಯವಾಗಿ ವರ್ತಿಸಿದ ಎಂಬ ಆರೋಪದಡಿ ಗಂಗಾದೇವಿ ಜಾಲಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ನರೇಶ್‌ನನ್ನು ಬಂಧಿಸಿ ಜೈಲಗಟ್ಟಿದ್ದರು. ಸದ್ಯ ನರೇಶ್‌ ಜೈಲಿನಲ್ಲೇ ಇದ್ದಾನೆ.ಹಬ್ಬದೂಟ ಮಾಡಿಸಿ ಬಳಿಕ ಮಕ್ಕಳ ಹತ್ಯೆ

ಇತ್ತ ಪತಿ ಜೈಲು ಸೇರಿದ್ದ ಬಳಿಕ ಖಿನ್ನತೆಗೆ ಒಳಗಾಗಿದ್ದ ಗಂಗಾದೇವಿ, ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಳು. ಯುಗಾದಿ ಹಬ್ಬದ ದಿನ(ಏ.9) ಮನೆಯಲ್ಲಿ ಮಕ್ಕಳಿಗೆ ಹಬ್ಬದೂಟ ಮಾಡಿಸಿದ್ದಳು. ತಡರಾತ್ರಿ ಮಕ್ಕಳು ನಿದ್ದೆಯಲ್ಲಿ ಇದ್ದಾಗ ತಲೆದಿಂಬಿನಿಂದ ಇಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಕೊನೆ ಕ್ಷಣದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಬಿಟ್ಟಿದ್ದಳು.

ಬಳಿಕ ಪೊಲೀಸ್‌ ನಿಯಂತ್ರಣ ಕೊಠಡಿ(112)ಗೆ ಕರೆ ಮಾಡಿದ್ದ ಗಂಗಾದೇವಿ, ಮನೆಯಲ್ಲಿ ಗಲಾಟೆಯಾಗಿದ್ದು, ಬರುವಂತೆ ಮನವಿ ಮಾಡಿದ್ದಳು. ಅದರಂತೆ ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸರು ಆಕೆಯ ಮನೆ ಬಳಿ ತೆರಳಿದ್ದಾಗ ಮಕ್ಕಳನ್ನು ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಳು. ಬಳಿಕ ಜಾಲಹಳ್ಳಿ ಠಾಣೆ ಪೊಲೀಸರು ಗಂಗಾದೇವಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.

Share this article