ಬೆಂಗಳೂರು : ಕೌಟುಂಬಿಕ ಕಲಹದಿಂದ ಇಬ್ಬರು ಮಕ್ಕಳ ಹತ್ಯೆಗೈದು ಸಾಯಲು ಯತ್ನಿಸಿದ ತಾಯಿ

KannadaprabhaNewsNetwork | Updated : Nov 23 2024, 04:20 AM IST

ಸಾರಾಂಶ

ಕೌಟುಂಬಿಕ ಕಲಹದಿಂದ ತಾಯಿಯೊಬ್ಬಳು ಇಬ್ಬರು ಮಕ್ಕಳ ಕುತ್ತಿಗೆ ಬಿಗಿದು ಕೊಲೆ ಮಾಡಿ ಬಳಿಕ ತಾನೂ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ.

 ಬೆಂಗಳೂರು : ಕೌಟುಂಬಿಕ ಕಲಹದಿಂದ ತಾಯಿಯೊಬ್ಬಳು ಇಬ್ಬರು ಮಕ್ಕಳ ಕುತ್ತಿಗೆ ಬಿಗಿದು ಕೊಲೆ ಮಾಡಿ ಬಳಿಕ ತಾನೂ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಬ್ರಹ್ಮಣ್ಯಪುರದ ಮುನಿಸ್ವಾಮಿನಾಯ್ದು ಲೇಔಟ್‌ನ ಶಂಭು ಸಾಹು(7) ಮತ್ತು ಸಿಯಾ ಸಾಹು(3) ಕೊಲೆಯಾದ ದುರ್ದೈವಿ ಮಕ್ಕಳು. ಮಮತಾ ಸಾಹು ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಗುರುವಾರ ಸಂಜೆ 6.30ರಿಂದ ರಾತ್ರಿ 10.30ರ ನಡುವೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಜಾರ್ಖಂಡ್‌ ಮೂಲದ ಸುನೀಲ್‌ ಕುಮಾರ್‌ ಸಾಹು ಮತ್ತು ಮಮತಾ ಸಾಹು ದಂಪತಿಗೆ ಶಂಭು ಸಾಹು ಮತ್ತು ಸಿಯಾ ಸಾಹು ಮಕ್ಕಳಿದ್ದರು. ದಂಪತಿ ತಮ್ಮಿಬ್ಬರು ಮಕ್ಕಳೊಂದಿಗೆ ಕಳೆದ 8 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಸುಬ್ರಹ್ಮಣ್ಯಪುರದ ಮುನಿಸ್ವಾಮಿ ನಾಯ್ದು ಲೇಔಟ್‌ನ ಬಾಡಿಗೆಯಲ್ಲಿ ನೆಲೆಸಿದ್ದರು. ಸುನೀಲ್‌ ಕುಮಾರ್‌ ಸಾಹು ಆಟೋ ಚಾಲಕನಾಗಿದ್ದರೆ, ಪತ್ನಿ ಮಮತಾ ಸಾಹು ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು.

ದಂಪತಿ ನಡುವೆ ಆಗಾಗ ಜಗಳ:

ಮದುವೆ ಆದಾಗಿನಿಂದಲೂ ದಂಪತಿ ನಡುವೆ ಸಣ್ಣ ವಿಚಾರಗಳಿಗೂ ಆಗಾಗ ಜಗಳಗಳಾಗುತ್ತಿದ್ದವು. ನ.20ರಂದು ಊಟದ ವಿಚಾರವಾಗಿ ದಂಪತಿ ನಡುವೆ ಜಗಳವಾಗಿತ್ತು. ನ.21ರಂದು ಸಂಜೆ ತಾನು ಊರಿಗೆ ಹೋಗಬೇಕು. ವಿಮಾನದ ಟಿಕೆಟ್ ಬುಕ್ ಮಾಡಿಕೊಡು ಎಂದು ಪತಿ ಸುನೀಲ್‌ನನ್ನು ಒತ್ತಾಯಿಸಿದ್ದಾಳೆ. ನನಗೆ ಮೂಗಿನ ಸಮಸ್ಯೆಯಿದ್ದು, ಆಸ್ಪತ್ರೆಗೆ ಹೋಗಿ ಬಂದ ಬಳಿಕ ಟಿಕೆಟ್‌ ಬುಕ್‌ ಮಾಡಿಸುವುದಾಗಿ ಸುನೀಲ್‌ ಸಂಜೆ 6.30ಕ್ಕೆ ಮನೆಯಿಂದ ಹೊರಗೆ ಹೋಗಿದ್ದಾನೆ.‘ 

ತಪ್ಪು ಮಾಡಿದೆ’ ಎಂದು ಮೆಸೇಜ್‌:

ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ನಂತರ ತನ್ನ ತಂಗಿಯ ಗಂಡನ ಮನೆಗೆ ಹೋಗಿ ಟಿಕೆಟ್‌ ಬುಕ್‌ ಮಾಡಿಸಿ, ರಾತ್ರಿ 9.15ಕ್ಕೆ ‘ಟಿಕೆಟ್‌ ಬುಕ್‌ ಆಗಿದೆ’ ಎಂದು ಪತ್ನಿ ಮಮತಾ ಸಾಹುಗೆ ಮೆಸೇಜ್‌ ಹಾಕಿದ್ದಾನೆ. ಇದಾದ ಐದು ನಿಮಿಷದ ಬಳಿಕ ಮಮತಾ ಸಾಹು ಓಕೆ ಎಂದು ಮೆಸೇಜ್‌ ಹಾಕಿದ್ದಾಳೆ. ಇದಾದ ಸ್ವಲ್ಪ ಸಮಯದ ಬಳಿಕ ‘ನಾನು ತಪ್ಪು ಮಾಡಿದೆ, ನನ್ನನ್ನು ಕ್ಷಮಿಸಿ ಬಿಡಿ’ ಎಂದು ಮತ್ತೊಂದು ಮೆಸೇಜ್‌ ಹಾಕಿದ್ದಾಳೆ. ಇದಾದ 15 ನಿಮಿಷದ ಬಳಿಕ ತಾನು ಕತ್ತು ಕೊಯ್ದುಕೊಂಡು ರಕ್ತ ಬರುವ ಫೋಟೋವನ್ನು ಕಳುಹಿಸಿ, ‘ನನ್ನನ್ನು ಕ್ಷಮಿಸಿ ಬಿಡಿ’ ಎಂದು ಮತ್ತೊಂದು ಮೆಸೇಜ್‌ ಕಳುಹಿಸಿದ್ದಾಳೆ.

ಉಸಿರುಗಟ್ಟಿಸಿ ಮಕ್ಕಳ ಕೊಲೆ:

ಇದರಿಂದ ಗಾಬರಿಗೊಂಡ ಸುನೀಲ್‌ ಹಾಗೂ ಆತನ ತಂಗಿಯ ಗಂಡ ಇಬ್ಬರು ರಾತ್ರಿ 10.30ಕ್ಕೆ ಮನೆಗೆ ಬಂದು ನೋಡಿದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್‌ ಆಗಿರುವುದು ಕಂಡು ಬಂದಿದೆ. ಬಳಿಕ ಸುನೀಲ್‌ ತನ್ನ ಬಳಿಯಿದ್ದ ಮತ್ತೊಂದು ಬೀಗ ಕೀನಿಂದ ಲಾಕ್‌ ತೆರೆದು ಒಳಗೆ ಹೋಗಿ ನೋಡಿದಾಗ, ಬೆಡ್ ರೂಮ್‌ನಲ್ಲಿ ಇಬ್ಬರು ಮಕ್ಕಳು ಮತ್ತು ಪತ್ನಿ ಮಮತಾ ಸಾಹು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದು ಕಂಡು ಬಂದಿದೆ.

ಸುತ್ತಲಿ ದಾರದಿಂದ ಮಕ್ಕಳ ಹತ್ಯೆ

ಬೆಡ್‌ ರೂಮ್‌ನ ಫ್ಯಾನ್‌ನಲ್ಲಿ ಸುತ್ತಲಿ ದಾರ ನೇತಾಡುತ್ತಿದ್ದು, ಅದರ ಪಕ್ಕ ಚಿಕ್ಕ ಸ್ಟಾಂಡ್‌ ಪತ್ತೆಯಾಗಿದೆ. ಈ ವೇಳೆ ಸುನೀಲ್‌ ಮಕ್ಕಳನ್ನು ಎಬ್ಬಿಸಲು ಪ್ರಯತ್ನಿಸಿದಾಗ ಇಬ್ಬರೂ ಮಕ್ಕಳು ಎಚ್ಚರಗೊಂಡಿಲ್ಲ. ಪತ್ನಿ ಮಮತಾ ಸಾಹು ಕುತ್ತಿಗೆಯಲ್ಲಿ ರಕ್ತ ಸೋರುತ್ತಿರುವುದು ಕಂಡು ಬಂದಿದೆ. ತಕ್ಷಣ ಸ್ನೇಹಿತರ ನೆರವು ಪಡೆದು ಕಾರಿನಲ್ಲಿ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಕಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಇಬ್ಬರು ಮಕ್ಕಳು ಈಗಾಗಲೇ ಮೃತಪಟ್ಟಿದ್ದಾರೆ ಎಂದು ದೃಢಪಡಿದ್ದಾರೆ. ಪತ್ನಿ ಮಮತಾ ಸಾಹುಗೆ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಪತ್ನಿ ವಿರುದ್ಧ ದೂರು

ಪತ್ನಿ ಮಮತಾ ಸಾಹು ಸುತ್ತಲಿ ದಾರದಿಂದ ತನ್ನಿಬ್ಬರು ಮಕ್ಕಳನ್ನು ನೇಣು ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ, ಅದು ಸಾಧ್ಯವಾಗದೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತನ್ನಿಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಪತ್ನಿ ಮಮತಾ ಸಾಹು ವಿರುದ್ಧ ಕ್ರಮ ಕೈಗೊಳ್ಳುವಂತೆ ಸುನೀಲ್ ಕುಮಾರ್‌ ಸಾಹು ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article