ರೈಲಿನಲ್ಲಿ ಸೀಟಿನ ವಿಚಾರಕ್ಕೆ ಯುವಕರಿಂದ ಪ್ರಯಾಣಿಕನ ಮೇಲೆ ಚಾಕು ಇರಿತ

KannadaprabhaNewsNetwork |  
Published : May 07, 2026, 01:45 AM IST
9ಕೆಎಂಎನ್ ಡಿ20,21 | Kannada Prabha

ಸಾರಾಂಶ

ಸೀಟಿನ ವಿಚಾರಕ್ಕೆ ಮೂವರು ಯುವಕರು ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯುವಕರ ಗುಂಪು ಪ್ರಯಾಣಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸೀಟಿನ ವಿಚಾರಕ್ಕೆ ಮೂವರು ಯುವಕರು ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯುವಕರ ಗುಂಪು ಪ್ರಯಾಣಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಮಂಡ್ಯದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ಮಧುಗಿರಿ ತಾಲೂಕಿನ ಬಡವನಹಳ್ಳಿಯ ಶಿವಕುಮಾರ್ (44), ಚನ್ನೇಗೌಡನದೊಡ್ಡಿಯ ಗೇಟ್‌ ಮನ್ ಕುಮಾರ (36), ಚನ್ನೇಗೌಡನದೊಡ್ಡಿಯ ಶಿವಕುಮಾರ್ (40) ಹಾಗೂ ಆರೋಪಿಗಳಾದ ಮೈಸೂರಿನ ಗೌಸಿಯಾನಗರದ ಖುರೇಶಿ (27), ವಾಸಿಂ (23), ಕ್ಯಾತನಹಳ್ಳಿಯ ಸೊಯೇಬ್ (20) ಗಾಯಗೊಂಡವರು.

ಘಟನೆ ವಿವರ:

ಮೈಸೂರಿನ ಗೌಶಿಯಾ ಬಡಾವಣೆಯ ಖುರೇಶಿ ತನ್ನ ಪತ್ನಿ ಸುಬಾನ್, ಇಬ್ಬರು ಮಕ್ಕಳು ಹಾಗೂ ಸುಜಾತ ಎಂಬ ಹಿಂದೂ ಹೆಣ್ಣು ಮಗಳು ಮತ್ತು ಸ್ನೇಹಿತರಾದ ವಾಸಿಂ, ಸೋಯೇಬ್ ಅವರೊಂದಿಗೆ ಚಿಂತಾಮಣಿಯಲ್ಲಿ ನಡೆಯುತ್ತಿದ್ದ ದರ್ಗಾ ಉತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ರಾಜರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ಈ ವೇಳೆ ರೈಲಿನಲ್ಲಿ ಸೀಟಿನ ವಿಚಾರಕ್ಕಾಗಿ ಸಹ ಪ್ರಯಾಣಿಕರೊಂದಿಗೆ ಆರೋಪಿಗಳಾದ ಖುರೇಶಿ, ವಾಸಿಂ, ಸೋಯೇಬ್ ಅವರು ಜಗಳ ತೆಗೆದಿದ್ದಾರೆ. ಮಾತಿನ ಚಕಮಕಿ ವೇಳೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಮಧ್ಯ ಪ್ರವೇಶಿಸಿದ ಮಧುಗಿರಿಯ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.

ಇದರಿಂದ ಕುಪಿತಗೊಂಡ ಆರೋಪಿಗಳು ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಸಾಲದೆಂಬಂತೆ ಅವರ ಕಿಬ್ಬೊಟ್ಟೆ, ತೋಳಿನ ಮೇಲೂ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಆತಂಕಗೊಂಡ ಶಿವಕುಮಾರ್ ಅವರು ರೈಲಿನ ಚೈನು ಎಳೆದಿದ್ದಾರೆ. ಚನ್ನೇಗೌಡನದೊಡ್ಡಿ ಬಳಿ ನಿಂತಿದೆ. ರೈಲು ನಿಲ್ಲುತ್ತಿದ್ದಂತೆ ಆರೋಪಿಗಳು ರೈಲಿನಿಂದ ಇಳಿದು ಹೊರಗೆ ಓಡಲು ಪ್ರಾರಂಭಿಸಿದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆರೋಪಿಗಳನ್ನು ಹಿಡಿಯುವಂತೆ ಕೂಗಿಕೊಂಡಿದ್ದಾರೆ.

ಇದರಿಂದ ಎಚ್ಚೆತ್ತ ಚನ್ನಪ್ಪನದೊಡ್ಡಿ ಗ್ರಾಮದ ಬಳಿ ಗೇಟ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರ ಅಡ್ಡ ಬಂದಾಗ ಆತನ ಮೇಲೂ ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಅದೇ ಗ್ರಾಮದ ಶಿವಕುಮಾರ್ ಅವರೂ ಸಹ ರಕ್ಷಣೆಗೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾರೆ.

ಈ ದೃಶ್ಯವನ್ನು ಕಂಡ ಸಾರ್ವಜನಿಕರು ತಕ್ಷಣ ಆರೋಪಿಗಳನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಸಾರ್ವಜನಿಕರ ಧರ್ಮದೇಟಿನಿಂದ ಮೂವರು ಆರೋಪಿಗಳಿಗೂ ಗಾಯಗಳಾಗಿವೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮದ್ದೂರು ಗ್ರಾಮಾಂತರ ಠಾಣೆ ಪಿಎಸ್‌ಐ ನಾರಾಯಣಿ ಮತ್ತು ಸಿಬ್ಬಂದಿ ಗುಂಪನ್ನು ಚದುರಿಸಿ ಯುವಕರನ್ನು ವಶಕ್ಕೆ ಪಡೆದು ಗಾಯಾಳುಗಳನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶ್ರೀರಂಗಪಟ್ಟಣ: ಮೈಸೂರಿನ ರೌಡಿಶೀಟರ್ ಬರ್ಬರ ಹತ್ಯೆ
ಬೆಂಗಳೂರು ನಗರದಲ್ಲಿ ಮತ್ತೇ ₹33 ಕೋಟಿ ಮೌಲ್ಯದ ಡ್ರಗ್ಸ್ ವಶ: 11 ಜನರ ಬಂಧನ