ಗೋಡೆ ಮೇಲೆ ದೇಶದ್ರೋಹ ವಾಕ್ಯ ಬರೆದ ಪೇದೆ

Published : Apr 30, 2024, 06:46 AM ISTUpdated : Apr 30, 2024, 06:47 AM IST
Taliban pakistan war

ಸಾರಾಂಶ

ಪೊಲೀಸ್‌ ಪೇದೆಯೊಬ್ಬ ತನ್ನ ಮನೆಯ ಕಾಂಪೌಂಡ್ ಮೇಲೆ ದೇಶದ್ರೋಹಿ, ಪ್ರಚೋದನಾತ್ಮಕ ಬರಹ ಬರೆದುಕೊಂಡು ಈಗ ಜೈಲುಪಾಲಾದ ಘಟನೆ ಸೂರ್ಯಸಿಟಿ ಠಾಣಾ ವ್ಯಾಪ್ತಿಯ ಬಂಡಾಪುರದಲ್ಲಿ ನಡೆದಿದೆ

ಆನೇಕಲ್ :  ಪೊಲೀಸ್‌ ಪೇದೆಯೊಬ್ಬ ತನ್ನ ಮನೆಯ ಕಾಂಪೌಂಡ್ ಮೇಲೆ ದೇಶದ್ರೋಹಿ, ಪ್ರಚೋದನಾತ್ಮಕ ಬರಹ ಬರೆದುಕೊಂಡು ಈಗ ಜೈಲುಪಾಲಾದ ಘಟನೆ ಸೂರ್ಯಸಿಟಿ ಠಾಣಾ ವ್ಯಾಪ್ತಿಯ ಬಂಡಾಪುರದಲ್ಲಿ ನಡೆದಿದೆ.ಗ್ರಾಮಸ್ಥರಿಂದ ವಿಷಯ ತಿಳಿದು ಆರೋಪಿ ಮುನಿರಾಜುನನ್ನು ಬಂಧಿಸಲು ಮುಂದಾದರು. ಒಳ್ಳೆಯ ಮಾತಿಗೆ ಶರಣಾಗದ ಆರೋಪಿಯನ್ನು ಬಲವಂತವಾಗಿ ವಶಕ್ಕೆ ಪಡೆಯಲಾಯಿತು. ಬಂಧಿಸಲು ಬಂದ ಪೊಲೀಸರಿಗೆ ‘ನನ್ನನ್ನು ಕರೆದೊಯ್ಯಲು ಬಂದು ದೊಡ್ಡ ತಪ್ಪು ಮಾಡುತ್ತಿದ್ದೀರಿ. ನನ್ನ ಕೈಯನ್ನು ಮುಟ್ಟಬೇಡಿ. ಬಿಡಿ’ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾನೆ.

ವಿಚಾರಣೆ ವೇಳೆ ತಾನು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲಸಕ್ಕೆ ಸೇರುವ ಮುನ್ನಾ ಒಂದು ದರ್ಗಾಕ್ಕೆ ಹೋಗಿ ಹರಕೆ ಮಾಡಿಕೊಂಡಿದ್ದೆ. ನನಗೆ ಪೊಲೀಸ್ ಉದ್ಯೋಗ ಸಿಕ್ಕಿದ್ದು, ಅಂದಿನಿಂದಲೇ ನಾನು ಮುಸ್ಲಿಂ ಧರ್ಮದ ಅನುಯಾಯಿಯಾದೆ ಎಂದು ಹೇಳಿಕೆ ನೀಡಿದ್ದಾನೆ. ತಾನೇ ತನ್ನ ಕೈಯಿಂದ ಮನೆ ಗೋಡೆ, ಕಾಂಪೌಂಡ್ ಹಾಗೂ ಗೇಟ್ ಮತ್ತು ಸುತ್ತಲಿನ ಗೋಡೆ ಮೇಲೆ ಬರೆದಿರುವುದಾಗಿ ತಿಳಿಸಿದ್ದಾನೆ. ಈ ಬರಹಗಳು ಸಮಾಜದ ಶಾಂತಿ ಕದಡುವುದಿಲ್ಲವೇ. ಜವಾಬ್ದಾರಿಯುತ ಪೊಲೀಸನಾಗಿ ಹೀಗೆ ಬರೆಯಬಹುದೇ ಎಂಬ ಮಾತಿಗೆ ತಾನು ಮಾಡಿರುವುದು ಸರಿ. ಪಶ್ಚಾತ್ತಾಪವಿಲ್ಲ ಎಂದಿದ್ದಾನೆ.

ಇಸ್ಲಾಂ, ಥರ್ಡ್ ವರ್ಲ್ಡ್ ವಾರ್, ತಾಲಿಬಾನ್ ಇಂಡಿಯಾ ಹೆಡ್ ಬಿ ಕೇರ್ ಫುಲ್ (Taliban india head be careful) ಸಲಾಂ ಇಸ್ಲಾಂ, ಸೇರಿದಂತೆ ಆತಂಕ ಸೃಷ್ಟಿಸುವ ಹಲವು ರೀತಿಯ ಗೋಡೆ ಬರಹಗಳು ಕಂಡು ಬಂದಿದೆ.

ಇಡೀ ಮನೆಯ ಗೋಡೆ ತುಂಬೆಲ್ಲಾ ದೇಶ ವಿರೋಧಿ ಬರಹಗಳಿದ್ದರೂ ಗೇಟ್‌ನ ಒಂದು ಬದಿಯಲ್ಲಿ ರಾಜೀವ್ ಗಾಂಧಿ ಎಂದೂ ಬರೆದಿದೆ. ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿರುವ ಈ ಪ್ರಚೋದನಾತ್ಮಕ ಬರಹಗಳು ದೇಶದ್ರೋಹಿ ಕೃತ್ಯ ಗಳೆಂದು ಗ್ರಾಮಸ್ಥರು ಹೇಳಿದ್ದಾರೆ.

ಅರೆ ಹುಚ್ಚನಂತೆ ಅಲೆಯುತ್ತಿರುವ ಕಾನ್‌ಸ್ಟೇಬಲ್‌ ಮುನಿರಾಜು ನಶೆಯಲ್ಲಿ ಇಂತಹ ಕೃತ್ಯವೆಸಗಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ, ಈತ ಬೆಂಗಳೂರಿನ ವಿಲ್ಸನ್ ಗಾರ್ಡನ್ ಮತ್ತು ಬಾಣಸವಾಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕಳೆದ ಮೂರು ತಿಂಗಳಿಂದ ಕರ್ತವ್ಯಕ್ಕೆ ಚಕ್ಕರ್ ಹೊಡೆದಿದ್ದಾನೆ. ಸದಾ ಕುಡಿದು ಹುಚ್ಚನಂತೆ ವರ್ತಿಸುವ ಈತ ಮೂರು ತಿಂಗಳ ಹಿಂದೆ ಮನೆಯ ಮೇಲೆ ಪಾಕಿಸ್ತಾನ ಬಾವುಟ ಹಾರಿಸಿದ್ದ ಎನ್ನಲಾಗಿದೆ. ಇತ್ತೀಚೆಗೆ ಗ್ರಾಮದಲ್ಲಿ ಗೂಂಡಾ ರೀತಿ ವರ್ತನೆ ಮಾಡುತ್ತಾ ಲಾಂಗು ಮಚ್ಚು ಹಿಡಿದು ಜನರನ್ನು ಹೆದರಿಸುತ್ತಿದ್ದ. ಈ ಹಿಂದೆಯೂ ಇದೇ ರೀತಿ ಬರಹಗಳನ್ನು ಬರೆದಿದ್ದು, ಗ್ರಾಮಸ್ಥರು ಗಲಾಟೆ ಮಾಡಿ ತೆರವುಗೊಳಿಸಿದ್ದರು. ಪುನಃ ಎರಡು ತಿಂಗಳ ಹಿಂದೆ ಮತ್ತೆ ಇಂತಹ ದೇಶದ್ರೋಹಿ ಬರಹಗಳನ್ನು ಬರೆದಿದ್ದಾನೆ. ಈ ಬಗ್ಗೆ ಸಂಬಂಧಿಕರು ಕೇಳಿದರೆ ಕ್ಯಾರೆ ಎನ್ನುವುದಿಲ್ಲ ಎಂದು ತಿಳಿದು ಬಂದಿದೆ.

ಮದ್ಯದ ಅಮಲಿನಲ್ಲಿ ಬರಹ

ಮನೆಯಲ್ಲಿ ತಂದೆ ತಾಯಿ ಮತ್ತು ಪತ್ನಿಯ ಮಾತನ್ನೂ ಕೇಳದೆ ಅವರ ಮೇಲೆಯೇ ಹಲ್ಲೆ ಮಾಡುತ್ತಿದ್ದ. ಕುಡಿತದ ಚಟಕ್ಕೆ ಬಿದ್ದ ಮತ್ತಿನಲ್ಲಿ ದೇಶ ವಿರೋಧಿ ಬರಹಗಳನ್ನು ಬರೆದಿದ್ದ ಎನ್ನಲಾಗಿದೆ. ಮದುವೆ ಆದ ಬಳಿಕ ತಾನು ತಾಲಿಬಾನ್‌ಗೆ ಸೇರಿಕೊಂಡಿದ್ದಾಗಿ ತಿಳಿಸಿ ಅಲ್ಲಾ ಎಂದು ಕೂಗುತ್ತಿದ್ದ ಎಂದು ಸಂಬಂಧಿ ಹನುಮಂತು ತಿಳಿಸಿದ್ದಾರೆ.

ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕೋಡಿಶೆಟ್ಟಿಪುರ ಬಳಿ ಸರಣಿ ಅಪಘಾತ: ವಿದ್ಯಾರ್ಥಿ ಸಾವು
ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?