4ನೇ ಮಹಡಿಯಿಂದ ಅನಾರೋಗ್ಯ ಪೀಡಿತ ತಾಯಿಯ ಎಸೆದು ಕೊಂದ!

KannadaprabhaNewsNetwork |  
Published : Apr 16, 2026, 04:00 AM IST
Savithramma

ಸಾರಾಂಶ

ಪಾರ್ಶ್ವ ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ತಾಯಿ ಆರೈಕೆ ಮಾಡಲಾಗದೆ ನೊಂದ ಮಗ, ಮನೆಯ ನಾಲ್ಕನೇ ಮಹಡಿಯಿಂದ ಹೆತ್ತಮ್ಮನನ್ನು ಕೆಳಗೆ ಎಸೆದು ಕೊಂದಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ಬುಧವಾರ ನಡೆದಿದೆ.

 ಬೆಂಗಳೂರು :  ಪಾರ್ಶ್ವ ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ತಾಯಿ ಆರೈಕೆ ಮಾಡಲಾಗದೆ ನೊಂದ ಮಗ, ಮನೆಯ ನಾಲ್ಕನೇ ಮಹಡಿಯಿಂದ ಹೆತ್ತಮ್ಮನನ್ನು ಕೆಳಗೆ ಎಸೆದು ಕೊಂದಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ಬುಧವಾರ ನಡೆದಿದೆ.

ರಾಜರಾಜೇಶ್ವರಿ ನಗರದ ಬಿಇಎಂಎಲ್‌ 3ನೇ ಹಂತದ ನಿವಾಸಿ ಸಾವಿತ್ರಮ್ಮ (75) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪುತ್ರ ಸಿ. ವೆಂಕಟೇಶ್ ಅಲಿಯಾಸ್ ದಶರಥ್‌ನನ್ನು ಆರ್‌.ಆರ್‌. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತನ್ನ ಮನೆಯ ಮಹಡಿಯಿಂದ ತಾಯಿಯನ್ನು ಮಧ್ಯಾಹ್ನ ಬಿಸಾಡಿ ವೆಂಕಟೇಶ್ ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 ವರ್ಷಗಳಿಂದ ನರಳಿದ ತಾಯಿ

ಖಾಸಗಿ ಕಂಪನಿಯಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್‌, ಬಿಇಎಲ್ ಲೇಔಟ್‌ನ 3ನೇ ಹಂತದಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ. ಖಾಸಗಿ ಕ್ಲಿನಿಕ್‌ನಲ್ಲಿ ಆತನ ಪತ್ನಿ ಸಹಾಯಕಿಯಾಗಿದ್ದಾರೆ. ಮೂರು ವರ್ಷಗಳಿಂದ ಪಾರ್ಶ್ವವಾಯುಪೀಡಿತರಾಗಿ ಆತನ ತಾಯಿ ಸಾವಿತ್ರಮ್ಮ ಹಾಸಿಗೆ ಹಿಡಿದಿದ್ದರು. ಹಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ತಾಯಿ ಚೇತರಿಕೆ ಕಾಣದೆ ಹೋದಾಗ ವೆಂಕಟೇಶ್ ಬೇಸರಗೊಂಡಿದ್ದ. ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ನರಳಾಟ ನೋಡಿ ಆತನ ಮನವು ಸಹಿಸಲಾರದಷ್ಟು ತಳಮಳಿಸಿದೆ.

ಇದೇ ಯಾತನೆಯಲ್ಲೇ ಮಾತೃ ಹತ್ಯೆಗೆ ವೆಂಕಟೇಶ್ ನಿರ್ಧರಿಸಿದ್ದಾನೆ. ಅಂತೆಯೇ ಮಧ್ಯಾಹ್ನ ಮನೆಯಿಂದ ಹೊರಗೆ ಎತ್ತಿಕೊಂಡು ಹೋಗಿ ಮಹಡಿಯಿಂದ ತಾಯಿಯನ್ನು ಆತ ಎಸೆದಿದ್ದಾನೆ. ಕೆಳಗೆ ಬಿದ್ದ ಸಾವಿತ್ರಮ್ಮ ಗಂಭೀರ ಸ್ವರೂಪವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾವಿತ್ರಮ್ಮ ಚೀರಾಟ ಕೇಳಿ ಸ್ಥಳೀಯರು ಜಮಾಯಿಸಿದ್ದಾರೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ಕರೆ ಮಾಡಿ ಘಟನೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಬಳಿಕ ಮನೆ ಮಾಲಿಕರ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತರ ಪುತ್ರ ವೆಂಕಟೇಶ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅಮ್ಮನ ಕಷ್ಟ ನೋಡಲಾರದೆ ಹತ್ಯೆ

ಮೂರು ವರ್ಷಗಳಿಂದ ತಾಯಿ ಹಾಸಿಗೆ ಹಿಡಿದಿದ್ದಳು. ಬಹಳಷ್ಟು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದೆ. ಆದರೆ ಆಕೆ ಸುಧಾರಿಸಲಿಲ್ಲ. ಪ್ರತಿ ದಿನ ಅಮ್ಮ ಕಷ್ಟಪಡುವುದು ನೋಡಲು ಸಂಕಟವಾಗುತ್ತಿತ್ತು. ಆ ಯಾತನಮಯ ಬದುಕಿಗೆ ತಾಯಿಗೆ ಮುಕ್ತಿ ಕೊಡಲು ನಿರ್ಧರಿಸಿದೆ ಎಂದು ವಿಚಾರಣೆ ವೇಳೆ ಆರೋಪಿ ವೆಂಕಟೇಶ್ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಸಾಲ ಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ
ಕಾರು ಪಲ್ಟಿ: ದಂಪತಿ ಸೇರಿ ಇಬ್ಬರು ಮಕ್ಕಳಿಗೆ ಗಾಯ