ಅಜ್ಜಿ-ಮೊಮ್ಮಕ್ಕಳ ಭೇಟಿಗೆ ಅವಕಾಶ ಕಲ್ಪಿಸಿದ ಕೋರ್ಟ್‌

KannadaprabhaNewsNetwork |  
Published : Apr 14, 2026, 02:15 AM IST
High court

ಸಾರಾಂಶ

ತಂದೆಯ ಜೊತೆಯಲ್ಲಿರುವ ಅಜ್ಜಿಯನ್ನು ಭೇಟಿ ಮಾಡಲು ತಾಯಿ ಸುಪರ್ದಿಯಲ್ಲಿರುವ ಮೊಮ್ಮಕ್ಕಳಿಗೆ ಅವಕಾಶ ಕಲ್ಪಿಸಿ ಹೈಕೋರ್ಟ್‌ ಆದೇಶಿಸಿದೆ. ಆಸ್ತಿ ವ್ಯಾಜ್ಯ ವಿಚಾರದಲ್ಲಿ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪತ್ನಿ ದಾಖಲಿಸಿದ್ದ ವಂಚನೆ ಪ್ರಕರಣ ರದ್ದುಪಡಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಆರ್‌.ನಟರಾಜ್‌ ಅವರು ಈ ಆದೇಶ ಮಾಡಿ ಮಾನವೀಯತೆ ಮೆರೆದಿದ್ದಾರೆ.

 ಬೆಂಗಳೂರು :  ತಂದೆಯ ಜೊತೆಯಲ್ಲಿರುವ ಅಜ್ಜಿಯನ್ನು ಭೇಟಿ ಮಾಡಲು ತಾಯಿ ಸುಪರ್ದಿಯಲ್ಲಿರುವ ಮೊಮ್ಮಕ್ಕಳಿಗೆ ಅವಕಾಶ ಕಲ್ಪಿಸಿ ಹೈಕೋರ್ಟ್‌ ಆದೇಶಿಸಿದೆ.

ವಂಚನೆ ಪ್ರಕರಣ ರದ್ದುಪಡಿಸಿದ ನ್ಯಾಯಮೂರ್ತಿ

ಆಸ್ತಿ ವ್ಯಾಜ್ಯ ವಿಚಾರದಲ್ಲಿ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪತ್ನಿ ದಾಖಲಿಸಿದ್ದ ವಂಚನೆ ಪ್ರಕರಣ ರದ್ದುಪಡಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಆರ್‌.ನಟರಾಜ್‌ ಅವರು ಈ ಆದೇಶ ಮಾಡಿ ಮಾನವೀಯತೆ ಮೆರೆದಿದ್ದಾರೆ.

ತಂದೆಯಿಂದ ಬಂದ ಆಸ್ತಿ ಹಕ್ಕುಗಳನ್ನು ಸಹೋದರನಿಗೆ ಬಿಡುಗಡೆಗೆ ಕ್ರಯ ಮಾಡಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಚ್‌ಆರ್‌ಬಿಆರ್‌ ಲೇಔಟ್‌ ನಿವಾಸಿ ಕ್ಯಾಪ್ಟನ್‌ (ನಿವೃತ್ತ) ವಿ.ಆರ್‌. ಶ್ರೀನಿವಾಸ್‌ ಅವರ ವಿರುದ್ಧ ಪತ್ನಿ ಎಸ್‌. ಪದ್ಮಜಾ ಅವರು ಬಾಣಸವಾಡಿ ಠಾಣಾ ಪೊಲೀಸರಿಗೆ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಕ್ಯಾ.ಶ್ರೀನಿವಾಸ್‌ ಅವರ ತಾಯಿ ಕಳಾವತಿ, ಸಹೋದರ ಯದುಕುಮಾರ್‌ ಮತ್ತು ಇವರ ಪತ್ನಿ ಲಕ್ಷ್ಮೀ ಗೋರೂರ್‌ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.

ಹೀಗಾಗಿ ಕ್ಯಾ.ಶ್ರೀನಿವಾಸ್‌, ಅವರ ತಾಯಿ, ಸಹೋದರ ಮತ್ತು ನಾದಿನಿ ಅವರು ತಮ್ಮ ವಿರುದ್ಧ ಪದ್ಮಜಾ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್‌ ಅವರ ಪೀಠ, ವಿವಾದಿತ ಆಸ್ತಿ ಹಕ್ಕು ಬಿಡುಗಡೆ ಕ್ರಯದ ಕುರಿತು ಪದ್ಮಜಾ ಅವರು ಈಗಾಗಲೇ ಸಿವಿಲ್‌ ದಾವೆ ಹೂಡಿದ್ದರು. ಇಂಥ ಸಂದರ್ಭದಲ್ಲಿ ಅದೇ ವಿಚಾರವಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಅರ್ಜಿದಾರರು ಕ್ರಿಮಿನಲ್‌ ಪ್ರಕರಣ ಎದುರಿಸುವುದು ಸರಿಯಲ್ಲ ಎಂದು ತಿಳಿಸಿತು. ಜೊತೆಗೆ, ಅರ್ಜಿದಾರರ ವಿರುದ್ಧದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ನಗರದ 11ನೇ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಇತ್ತೀಚೆಗೆ ಆದೇಶಿಸಿದೆ.

ವಿಚಾರಣೆ ವೇಳೆ ಕ್ಯಾ. ಶ್ರೀನಿವಾಸ್‌ ಮತ್ತು ಪದ್ಮಜಾ ಅವರ ಇಬ್ಬರು ಮಕ್ಕಳ ಪರ ವಕೀಲೆ ಕಲಾಶ್ರೀ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕ್ಯಾ.ಶ್ರೀನಿವಾಸ್‌ ಅವರ ತಾಯಿ ಕಳಾವತಿಯನ್ನು (ಅಜ್ಜಿ) ಭೇಟಿ ಮಾಡಲು ಮೊಮ್ಮಕ್ಕಳು ಬಯಸಿದ್ದಾರೆ. ಅದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಒಂದು ತಾಸು ಅಜ್ಜಿ-ಮೊಮ್ಮಕ್ಕಳ ಭೇಟಿ

ಆ ಮನವಿ ಪುರಸ್ಕರಿಸಿದ ನ್ಯಾಯಾಲಯ, ಕಳಾವತಿ ಅವರು ಪುತ್ರ ಕ್ಯಾ.ಶ್ರೀನಿವಾಸ್‌ ಅವರ ಆರೈಕೆ ಮತ್ತು ಸುಪರ್ದಿಯಲ್ಲಿದ್ದಾರೆ. ಕಳಾವತಿಯನ್ನು ಭೇಟಿ ಮಾಡಲು ಮೊಮ್ಮಕ್ಕಳು ಆಸೆ ವ್ಯಕ್ತಪಡಿಸಿದ್ದಾರೆ. ಅದರಂತೆ ಏ.11ರಂದು ಬೆಳಗ್ಗೆ 11 ಗಂಟೆಗೆ ಕಲ್ಯಾಣ ನಗರದ ಎಚ್‌ಆರ್‌ಬಿಆರ್‌ ಲೇಔಟ್‌ನ ಮೊದಲನೇ ಬ್ಲಾಕ್‌ನ ಗಣೇಶ ದೇವಸ್ಥಾನ ಸಮೀಪದ ನಂದಿನಿ ಬೂತ್‌ ಬಳಿ ಅಜ್ಜಿಯನ್ನು ಮೊಮ್ಮಕ್ಕಳು ಭೇಟಿ ಮಾಡಲು ಕ್ಯಾ.ಶ್ರೀನಿವಾಸ್‌ ಸೂಕ್ತ ವ್ಯವಸ್ಥೆ ಮಾಡಬೇಕು. ಈ ವೇಳೆ ಯಾವುದೇ ಗದ್ದಲ ಉಂಟಾಗದಂತೆ ಖಾತರಿಪಡಿಸಲು ವಕೀಲೆ ಕಲಾಶ್ರೀ ಅವರು, ಸ್ಥಳಕ್ಕೆ ಮಕ್ಕಳೊಂದಿಗೆ ತೆರಳಬೇಕು ಎಂದು ಆದೇಶಿಸಿತ್ತು.  

60*80 ಸೈಟ್‌ ವಿವಾದ

2017ರಲ್ಲಿ ಪದ್ಮಜಾ ಅವರಿಂದ ವಿಚ್ಛೇದನಗೊಂಡ ಕ್ಯಾ.ಶ್ರೀನಿವಾಸ್‌, ಪತ್ನಿ ಮತ್ತು ಇಬ್ಬರು ಮಕ್ಕಳಿಗೆ 1.6 ಕೋಟಿ ಶಾಶ್ವತ ಜೀವನಾಂಶ ಕಲ್ಪಿಸಿದ್ದಾರೆ. ಮಕ್ಕಳು ತಾಯಿಯ ಸುಪರ್ದಿಯಲ್ಲಿದ್ಧಾರೆ. ಕಳಾವತಿ ಅವರು ಪುತ್ರ ಕ್ಯಾ.ಶ್ರೀನಿವಾಸ್ ಆರೈಕೆಯಲ್ಲಿದ್ದಾರೆ. ಆದರೆ, 2014ರಲ್ಲಿ ತಂದೆಯಿಂದ ಬಂದ ಆಸ್ತಿಯ (60*80 ಅಡಿ ವಿಸ್ತೀರ್ಣದ ನಿವೇಶನ) ಹಕ್ಕುಗಳನ್ನು ಕ್ಯಾ.ಶ್ರೀನಿವಾಸ್‌ ಅವರು ತನ್ನ ಸಹೋದರಿಗೆ ಬಿಟ್ಟುಕೊಟ್ಟು ಕ್ರಯ ಮಾಡಿದ್ದರು. ಈ ಕುರಿತು ಪದ್ಮಜಾ ಸಿವಿಲ್‌ ದಾವೆ ಹೂಡಿದ್ದರು. ಜೊತೆಗೆ ಪೊಲೀಸ್‌ ಠಾಣೆಗೆ ಕ್ರಿಮಿನಲ್‌ ದೂರು ನೀಡಿದ್ದರು. ಅದರ ರದ್ದತಿಗೆ ಹೈಕೋರ್ಟ್‌ ಅರ್ಜಿ ಸಲ್ಲಿಸಲಾಗಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಮಗಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ನೇಣು ಬಿಗಿದುಕೊಂಡ ತಾಯಿ
ನೋಯ್ಡಾದಲ್ಲಿ ಹಿಂಸಾರೂಪ ಪಡೆದ ಕಾರ್ಮಿಕ ಪ್ರತಿಭಟನೆ