ಬೆಂಗಳೂರು : ಸಿಗರೇಟ್ ವಿಚಾರಕ್ಕೆ ಕಾಂಡಿಮೆಂಟ್ಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆನಗಾನಹಳ್ಳಿ ಪೈ ಬಡಾವಣೆ ನಿವಾಸಿ ಗುರು (28) ಮತ್ತು ಸಂಜಯನಗರದ ಭೂಪಸಂದ್ರ ನಿವಾಸಿ ವಿಶ್ವಾಸ್ (24) ಬಂಧಿತರು. ಆರೋಪಿಗಳು ಜ.8ರಂದು ಸಂಜೆ ಭೂಪಸಂದ್ರದ ಶ್ರೀಗುರು ರಾಘವೇಂದ್ರ ಕಾಂಡಿಮೆಂಟ್ಸ್‌ಗೆ ಬಂದಿದ್ದು, ಸಿಗರೇಟ್ ವಿಚಾರಕ್ಕೆ ಗಲಾಟೆ ತೆಗೆದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಕಾಂಡಿಮೆಂಟ್ಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಗರೇಟ್ ಕೊಡುವಂತೆ ನಿಂದನೆ:
ಬಂಧಿತ ಆರೋಪಿಗಳ ಪೈಕಿ ಗುರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ಆರೋಪಿ ವಿಶ್ವಾಸ್ ಆಟೋ ಚಾಲಕನಾಗಿದ್ದಾನೆ. ಈ ಇಬ್ಬರು ಬುಧವಾರ ಸಂಜೆ ಶ್ರೀಗುರು ರಾಘವೇಂದ್ರ ಕಾಂಡಿಮೆಂಟ್ಸ್‌ಗೆ ಬಂದು ಜ್ಯೂಸ್ ಕೊಡುವಂತೆ ಸಿಬ್ಬಂದಿಯನ್ನು ಕೇಳಿದ್ದಾರೆ. ಸಿಬ್ಬಂದಿ ಜ್ಯೂಸ್ ಕೊಟ್ಟ ಬಳಿಕ ಸಿಗರೇಟ್ ಕೊಡುವಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ ಗ್ರಾಹಕರ ಎದುರು ಗಲಾಟೆ ಮಾಡಬೇಡಿ, ಸಿಗರೇಟ್ ಬೇಕಿದ್ದಲ್ಲಿ ಹಣ ಕೊಡಿ ಎಂದು ಕಾಂಡಿಮೆಂಟ್ಸ್ ಸಿಬ್ಬಂದಿ ಕೇಳಿದಾಗ ಹಲ್ಲೆ ಮಾಡಿದ್ದಾರೆ.
ಲೋಕಲ್ ಹುಡುಗರೆಂದು ಬಾಟಲ್‌ಗಳಿಂದ ಹಲ್ಲೆ
ಸಿಬ್ಬಂದಿ ಹಣ ಕೇಳಿದ್ದರಿಂದ ರೊಚ್ಚಿಗೆದ್ದ ಇಬ್ಬರು ಆರೋಪಿಗಳು, ನಾವು ಲೋಕಲ್ ಹುಡುಗರು. ನಮ್ಮ ಬಳಿಯೇ ಬಾಲ ಬಿಚ್ಚುತ್ತೀರಾ? ನಾವು ಕೇಳಿದಾಗ ಸಿಗರೇಟ್ ಕೊಡಬೇಕು. ಇಲ್ಲವಾದರೆ, ಅಂಗಡಿ ನಡೆಸಲು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದರು. ಜ್ಯೂಸ್ ಬಾಟಲ್‌ಗಳನ್ನು ಒಡೆದು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಕಾಂಡಿಮೆಂಟ್ಸ್‌ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದರು.
ಆರೋಪಿಗಳ ಗೂಂಡಾ ವರ್ತನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿತ್ತು. ಘಟನೆ ಸಂಬಂಧ ಕಾಂಡಿಮೆಂಟ್ಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.