ಅಪ್ರಾಪ್ತೆಯನ್ನು ಪ್ರೀತಿಸಿ ಅಪಹರಿಸಿದ ಟ್ಯೂಷನ್‌ ಶಿಕ್ಷಕ : ಆರೋಪಿ ಪತ್ತೆಗಾಗಿ ಲುಕೌಟ್‌ ನೋಟಿಸ್‌ ಜಾರಿ

KannadaprabhaNewsNetwork |  
Published : Jan 04, 2025, 01:32 AM ISTUpdated : Jan 04, 2025, 04:33 AM IST
Abhishek gowda | Kannada Prabha

ಸಾರಾಂಶ

 15 ವರ್ಷದ ಬಾಲಕಿಯನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ಟ್ಯೂಷನ್‌ ಹೇಳಿಕೊಡುವ ಶಿಕ್ಷಕನೇ ಅಪಹರಣ ಮಾಡಿದ ಆರೋಪದಡಿ ಜೆ.ಪಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ  

 ಬೆಂಗಳೂರು :  ಟ್ಯೂಷನ್‌ಗೆ ಬರುತ್ತಿದ್ದ 15 ವರ್ಷದ ಬಾಲಕಿಯನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ಟ್ಯೂಷನ್‌ ಹೇಳಿಕೊಡುವ ಶಿಕ್ಷಕನೇ ಅಪಹರಣ ಮಾಡಿದ ಆರೋಪದಡಿ ಜೆ.ಪಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಲುಕೌಟ್‌ ನೋಟಿಸ್‌ ಜಾರಿ ಮಾಡಿರುವ ಪೊಲೀಸರು ಸುಳಿವು ನೀಡಿದವರಿಗೆ ₹25 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಕನಕಪುರ ಮೂಲದ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಜೆ.ಪಿ.ನಗರ 1ನೇ ಹಂತದ ಅಭಿಷೇಕ್‌ ಗೌಡ(30) ಎಂಬಾತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ. ನ.23ರಂದು ಘಟನೆ ಈ ಘಟನೆ ನಡೆದಿದೆ. ಆರೋಪಿ ಅಭಿಷೇಕ್‌ ಗೌಡ ಮತ್ತು ಬಾಲಕಿಯ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?: ದೂರುದಾರ ಬಾಲಕಿ ತಂದೆ ರಾಮನಗರ ಜಿಲ್ಲೆ ಕನಕಪುರ ಮೂಲದವರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬನಶಂಕರಿ 2ನೇ ಹಂತದ ನೆಲೆಸಿದ್ದಾರೆ. ಇವರ ಎರಡನೇ ಮಗಳು ಯಲಚೇನಹಳ್ಳಿಯ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಎಲ್ಸಿ ವ್ಯಾಸಂಗ ಮಾಡುತ್ತಿದ್ದಳು. ಜೆ.ಪಿ.ನಗರ 1ನೇ ಹಂತದ ಆಂಜನೇಯ ದೇವಸ್ಥಾನದ ಬಳಿ ಅಭಿಷೇಕ್‌ ಗೌಡ ಎಂಬಾತನ ಬಳಿ ಟ್ಯೂಷನ್‌ಗೆ ಹೋಗುತ್ತಿದ್ದಳು. ಪ್ರತಿ ದಿನ ಸಂಜೆ 5 ಗಂಟೆಗೆ ಹೋಗಿ ರಾತ್ರಿ 8.30ಕ್ಕೆ ಮನೆಗೆ ಬರುತ್ತಿದ್ದಳು.

ಟ್ಯೂಷನ್‌ನಿಂದ ವಾಪಾಸ್‌ ಬರಲಿಲ್ಲ: ನ.23ರಂದು ಮಧ್ಯಾಹ್ನ 3.30ಕ್ಕೆ ಸಹೋದರ ಬಾಲಕಿಯನ್ನು ಟ್ಯೂಷನ್‌ಗೆ ಬಿಟ್ಟು ಬಂದಿದ್ದಾನೆ. ಸಂಜೆ 7 ಗಂಟೆಯಾದರೂ ಮನೆಗೆ ವಾಪಾಸ್‌ ಬಾರದ ಕಾರಣ ಪೋಷಕರು ಟ್ಯೂಷನ್‌ ಬಳಿಗೆ ತೆರಳಿ ವಿಚಾರ ಮಾಡಿದ್ದಾರೆ. ಈ ವೇಳೆ ಶಿಕ್ಷಕ ಅಭಿಷೇಕ್‌ ಗೌಡ ಮನೆ ಬೀಗ ಹಾಕಿರುವುದು ಕಂಡು ಬಂದಿದೆ. ಆ ಕಟ್ಟಡದ ಮನೆಯೊಂದರಲ್ಲಿದ್ದ ಪರಿಚಿತ ಯುವತಿಯನ್ನು ವಿಚಾರ ಮಾಡಿದಾಗ, ಶಿಕ್ಷಕ ಅಭಿಷೇಕ್‌ ಗೌಡ ನಾನು ಬರುವುದು ತಡವಾದರೆ, ಮನೆಗೆ ಬೀಗ ಹಾಕಿ ಕೀ ಅನ್ನು ನೀವೇ ಇರಿಸಿಕೊಳ್ಳುವಂತೆ ಹೇಳಿದ್ದರು. ಹೀಗಾಗಿ ಅವರ ಮನೆಗೆ ಬೀಗ ಹಾಕಿದ್ದೇನೆ ಎಂದು ಹೇಳಿದ್ದಾಳೆ.

ಮೊಬೈಲ್‌ನಲ್ಲಿ ಫೋಟೊ, ವಿಡಿಯೋ ಪತ್ತೆ: ಬಳಿಕ ಬಾಲಕಿಯ ಪೋಷಕರು ಆ ಯುವತಿಯಿಂದ ಶಿಕ್ಷಕನ ಮನೆ ಬೀಗದ ಕೀ ಪಡೆದು ಬೀಗ ತೆಗೆದು ನೋಡಿದಾಗ, ಮನೆಯ ಟೇಬಲ್‌ ಮೇಲೆ ಮೊಬೈಲ್‌ ಇರುವುದು ಕಂಡು ಬಂದಿದೆ. ಆ ಮೊಬೈಲ್‌ ತೆರೆದು ನೋಡಿದಾಗ ಶಿಕ್ಷಕ ಅಭಿಷೇಕ್‌ ಗೌಡ ಮತ್ತು ಬಾಲಕಿ ಮದುವೆಯಾಗಿರುವ ಫೋಟೋ ಕಂಡು ಬಂದಿದೆ. ಅಂತೆಯೇ ವಿಡಿಯೋವೊಂದು ಪತ್ತೆಯಾಗಿದೆ. ನಾನು ಮತ್ತು ಬಾಲಕಿ ಒಂದು ವರ್ಷದಿಂದ ಪ್ರೀತಿಸುತ್ತಿರುವುದಾಗಿ ಶಿಕ್ಷಕ ಅಭಿಷೇಕ್‌ ಗೌಡ ಮಾತನಾಡಿರುವ ವಿಡಿಯೋ ಅದಾಗಿದೆ. ಹೀಗಾಗಿ ಬಾಲಕಿ ಪೋಷಕರು ಜೆ.ಪಿ.ನಗರ ಪೊಲೀಸ್‌ ಠಾಣೆಗೆ ತೆರಳಿ ಟ್ಯೂಷನ್‌ ಶಿಕ್ಷಕ ಅಭಿಷೇಕ್‌ ಗೌಡ ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಜಿಮ್‌ ಟ್ರೈನರ್‌ ಆಗಿದ್ದ ವಿವಾಹಿತ ಶಿಕ್ಷಕ: ಅಭಿಷೇಕ್‌ ಗೌಡ ರಾಮನಗರ ಜಿಲ್ಲೆ ಕನಕಪುರದ ಹಾರೋಹಳ್ಳಿ ಮೂಲದವನು. ಈತ ವಿವಾಹಿತನಾಗಿದ್ದು, ಜೆ.ಪಿ.ನಗರ 1ನೇ ಹಂತದ ಆಂಜನೇಯ ದೇವಸ್ಥಾನದ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಜಿಮ್‌ ಟ್ರೈನರ್‌ ಆಗಿರುವ ಆತ 1ರಿಂದ 10 ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್‌ ಮಾಡುತ್ತಿದ್ದ. ಈತನ ಬಳಿಗೆ ಟ್ಯೂಷನ್‌ಗೆ ಬರುತ್ತಿದ್ದ ಬಾಲಕಿಗೆ ಪ್ರೀತಿ-ಪ್ರೇಮ ಎಂದು ನಂಬಿಸಿ ಜತೆಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಮನೆಯಲ್ಲೇ ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ ಬಿಟ್ಟು ಹೋಗಿದ್ದಾನೆ. ಈಗಾಗಲೇ ಪೊಲೀಸರು ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಆರೋಪಿಯ ಪತ್ತೆಗೆ ಶೋಧಿಸುತ್ತಿದ್ದಾರೆ. ಈ ನಡುವೆ ಆರೋಪಿಯ ಪತ್ತೆಗಾಗಿ ಲುಕೌಟ್‌ ನೋಟಿಸ್‌ ಜಾರಿ ಮಾಡಿರುವ ಪೊಲೀಸರು, ಆರೋಪಿಯ ಸುಳಿವು ನೀಡಿದವರಿಗೆ 25 ಸಾವಿರ ರು. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

PREV

Recommended Stories

24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೋಡಗಿದ್ದ ವಿದೇಶಿ ಮಹಿಳೆಯರಿಬ್ಬರ ಬಂಧನ