ಗಾಂಧಿ ಬಜಾರ್‌ ಮರು ವಿನ್ಯಾಸ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

KannadaprabhaNewsNetwork |  
Published : Jan 04, 2025, 01:31 AM ISTUpdated : Jan 04, 2025, 04:34 AM IST
ಗಾಂಧಿ ಬಜಾರ್‌  | Kannada Prabha

ಸಾರಾಂಶ

  ಗಾಂಧಿಬಜಾರ್‌ ಮುಖ್ಯರಸ್ತೆಯನ್ನು ಆಧುನೀಕರಣಕ್ಕಾಗಿ ಜಾರಿ ಮಾಡುತ್ತಿರುವ ‘ಗಾಂಧಿ ಬಜಾರ್‌ ಮಾರುಕಟ್ಟೆ ಬೀದಿ ಮರು ವಿನ್ಯಾಸ ಯೋಜನೆ’ಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್‌ ಆದೇಶಿಸಿದೆ.

  ಬೆಂಗಳೂರು : ವಾಹನಗಳ ಸುಗಮ ಸಂಚಾರ, ಬೀದಿ ವ್ಯಾಪಾರಿಗಳು ಮತ್ತು ಪಾದಚಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಗಾಂಧಿಬಜಾರ್‌ ಮುಖ್ಯರಸ್ತೆಯನ್ನು ಆಧುನೀಕರಣಕ್ಕಾಗಿ ಜಾರಿ ಮಾಡುತ್ತಿರುವ ‘ಗಾಂಧಿ ಬಜಾರ್‌ ಮಾರುಕಟ್ಟೆ ಬೀದಿ ಮರು ವಿನ್ಯಾಸ ಯೋಜನೆ’ಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಹೆರಿಟೇಜ್‌ ಬಸವನಗುಡಿ ರೆಸಿಡೆಂಟ್ಸ್‌ ವೆಲ್‌ಫೇರ್‌ ಫೋರಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಗಾಂಧಿ ಬಜಾರ್‌ ಜನ ಸಂದಣಿ ಪ್ರದೇಶವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಬೀದಿ ವ್ಯಾಪಾರಿಗಳು ರಸ್ತೆಯಲ್ಲಿ ಕೂತು ವ್ಯಾಪಾರ ಮಾಡುತ್ತಿರುತ್ತಾರೆ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಹನ ಮತ್ತು ಜನ ದಟ್ಟಣೆ ಹೆಚ್ಚಿದೆ. ಇದರಿಂದ ವಿವಿಧ ಜಕ್ಷನ್‌ಗಳಲ್ಲಿ ಪಾದಚಾರಿಗಳು ಸುರಕ್ಷತೆಯಿಂದ ರಸ್ತೆ ದಾಟಲು, ಬೀದಿ ವ್ಯಾಪಾರಿಗೆ ಸೂಕ್ತ ಸ್ಥಳಾವಕಾಶ ಒದಗಿಸಲು, ವಾಹನಗಳ ಸುಗಮ ಸಂಚಾರ ಹಾಗೂ ನಿಲುಗಡೆಗೆ, ತಂಗುದಾಣದೊಂದಿಗೆ ಬಸ್‌ ನಿಲ್ದಾಣ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ‘ಗಾಂಧಿ ಬಜಾರ್‌ ಮಾರುಕಟ್ಟೆ ಬೀದಿ ಮರು ವಿನ್ಯಾಸ ಯೋಜನೆ’ ಜಾರಿ ಮಾಡಲಾಗುತ್ತಿದೆ. ಇಡೀ ಗಾಂಧಿ ಬಜಾರ್‌ ರಸ್ತೆಯ ಉತ್ತಮ ನಿರ್ವಹಣೆ ಪ್ರಸ್ತಾವನೆಯನ್ನು ಈ ಯೋಜನೆ ಒಳಗೊಂಡಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?: ಗಾಂಧಿ ಬಜಾರ್‌ ಮುಖ್ಯರಸ್ತೆ 90 ಅಡಿ ಅಗಲಿವಿದೆ. ರಸ್ತೆಯ ಎರಡುಬದಿ 8 ರಿಂದ 9 ಅಡಿ ಪಾದಚಾರಿ ಮಾರ್ಗವಿದೆ. ವಾಹನ ನಿಲುಗಡೆ ಅಗತ್ಯವಾದಷ್ಟು ಸ್ಥಳಾವಕಾಶವಿದೆ. ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ, ಈ ಯೊಜನೆಯಿಂದ 90 ಅಡಿ ಅಗಲದ ರಸ್ತೆಯು 23 ಅಡಿಗೆ ಇಳಿಯಲಿದೆ. ಪಾದಚಾರಿ ಮಾರ್ಗ ದೊಡ್ಡದಾಗಿ, ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ಇನ್ನೂ ರಸ್ತೆಯ ವೈಟ್‌ ಟಾಪಿಂಗ್‌ ಮತ್ತು ಆಧುನೀಕರಣ ಸಹ ವೈಜ್ಞಾನಿಕವಾಗಿಲ್ಲ. ಆಧುನೀಕರಣ ಹೆಸರಿನಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ತಪ್ಪಾದ ಯೋಜನೆ ಜಾರಿ ಮಾಡಲಾಗುತ್ತಿದೆ. ಆದ್ದರಿಂದ ಈ ಯೋಜನೆಯನ್ನು ಅವೈಜ್ಞಾನಿಕವೆಂದು ಘೋಷಿಸಬೇಕು ಹಾಗೂ ಯೋಜನೆ ಜಾರಿ ಮಾಡದಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌