ಬೆಂಗಳೂರಿನಲ್ಲಿ ಅಸ್ಸಾಂ ನಿಷೇಧಿತ ಉಲ್ಫಾ ಸಂಘಟನೆಯ ಉಗ್ರನ ಬಂಧನ: ಐಇಡಿ ಸ್ಫೋಟ ಸಂಚು ವಿಫಲ

KannadaprabhaNewsNetwork |  
Published : Sep 27, 2024, 01:15 AM ISTUpdated : Sep 27, 2024, 04:39 AM IST
ಗಿರೀಶ್‌ | Kannada Prabha

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆ ವಿರೋಧಿಸಿ ಅಸ್ಸಾಂನಲ್ಲಿ ಐಇಡಿ ಸ್ಫೋಟಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಶಂಕಿತ ಉಲ್ಫಾ ಉಗ್ರನನ್ನು ಬೆಂಗಳೂರಿನಲ್ಲಿ ಎನ್ಐಎ ಬಂಧಿಸಿದೆ 

 ಬೆಂಗಳೂರು : ಅಸ್ಸಾಂನ ಗುವಾಟಿಯಲ್ಲಿ ವಿಧ್ವಂಸಕ ಕೃತ್ಯದ ಸಂಚು ಪ್ರಕರಣ ಸಂಬಂಧ ನಿಷೇಧಿತ ಉಲ್ಫಾ (ಯುನೈಟೆಡ್ ಲಿಬಿರೇಷನ್ ಫ್ರಂಟ್ ಆಫ್ ಅಸ್ಸಾಂ) ಸಂಘಟನೆಯ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು ಗುರುವಾರ ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ.

ಗಿರೀಶ್ ಬರುವಾ ಅಲಿಯಾಸ್ ಗೌತಮ್ ಬರುವಾ(32) ಬಂಧಿತ ಶಂಕಿತ ಉಗ್ರ. ಉಲ್ಫಾ ಉಗ್ರರು ಸ್ವಾತಂತ್ರ್ಯ ದಿನಾಚರಣೆ ವಿರೋಧಿಸಿ ಗುವಾಹಟಿ ಸೇರಿದಂತೆ ಅಸ್ಸಾಂ ಹಲವೆಡೆ ಸುಧಾರಿತಾ ಸ್ಫೋಟಕ ಸಾಧನಾ(ಐಇಡಿ) ಸ್ಫೋಟಿಸಲು ಸಂಚು ರೂಪಿಸಿದ್ದರು. ಈ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಶಂಕಿತ ಉಗ್ರ ಗಿರೀಶ್ ತಲೆಮರೆಸಿಕೊಂಡಿದ್ದ. ಈತನ ಬೆನ್ನು ಬಿದ್ದಿದ್ದ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಗಿರೀಶ್ ಬೆಂಗಳೂರಿನ ಹೊರವಲಯದ ಆನೇಕಲ್ ಸಮೀಪ ಜಿಗಣಿಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಸ್ಥಳೀಯ ಪೊಲೀಸರ ನೆರವು ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಂತ್ರಿಕ ಕಾರಣದಿಂದ ಆಗದ ಸ್ಫೋಟ:

ಶಂಕಿತ ಉಗ್ರ ಗಿರೀಶ್, ಸ್ನೇಹಿತ ಅಭಿಷೇಕ್ ಗುಹಾ ಹಾಗೂ ಇತರರು ಆ.26ರಂದು ಗುವಾಹಟಿ ಸೇರಿ ಅಸ್ಸಾಂ ರಾಜ್ಯದ ವಿವಿಧೆಡೆ ಒಂದೇ ಬಾರಿಗೆ ಐಇಡಿ ಸ್ಟೋಟಕ್ಕೆ ಸಂಚು ರೂಪಿಸಿ, 26 ಕಡೆಗಳಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟಿದ್ದರು. ಗಿರೀಶ್ ಪ್ರಮುಖವಾಗಿ ಅಸ್ಸಾಂನ ಉತ್ತರ ಲಖಿಂಪುರ ಜಿಲ್ಲೆಯ 10ಕ್ಕೂ ಹೆಚ್ಚು ಕಡೆಗಳಲ್ಲಿ ಐಇಡಿ ಇರಿಸಿದ್ದ. ಆದರೆ, ತಾಂತ್ರಿಕ ಕಾರಣಗಳಿಗೆ ಅವುಗಳು ಸ್ಫೋಟಗೊಂಡಿರಲಿಲ್ಲ.

ಈ ಸಂಬಂಧ ಎನ್ಐಎ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಆರಂಭದಲ್ಲಿ ಶಂಕಿತ ಉಗ್ರ ಅಭಿಷೇಕ್ ಗುಹಾನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಈ ಸಂಚಿನಲ್ಲಿ ಭಾಗಿಯಾಗಿದ್ದ ಗಿರೀಶ್ ಬೆಂಗಳೂರಿನ ಜಿಗಣಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಗಿರೀಶ್ನನ್ನು ಬಂಧಿಸಿದ್ದಾರೆ.

ಕುಟುಂಬ ಸಹಿತ ನಗರಕ್ಕೆ:

ಶಂಕಿತ ಉಗ್ರ ಅಭಿಷೇಕ್ ಗುಹಾ ಬಂಧನದ ಬೆನ್ನಲ್ಲೇ ಇತರೆ ಶಂಕಿತ ಉಗ್ರರು ಬಂಧನದ ಭೀತಿಯಲ್ಲಿ ಅಸ್ಸಾಂ ತೊರೆದಿದ್ದರು. ಶಂಕಿತ ಉಗ್ರ ಗಿರೀಶ್ ಸೆ.11ರಂದು ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದ. ಬಳಿಕ ಅಭಿಷೇಕ್ ಗುಹಾನ ಪತ್ನಿಯ ನೆರವು ಪಡೆದು ಜಿಗಣಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.

ನಕಲಿ ದಾಖಲೆ ಸಲ್ಲಿಸಿ ಸೆಕ್ಯೂರಿಟಿ ಗಾರ್ಡ್‌

ಕೋರಮಂಗಲದ ಎಫ್360 ಎಂಬ ಸೆಕ್ಯೂರಿಟಿ ಏಜೆನ್ಸಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ, ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಎಲಿಮೆಂಟಲ್ ಫರ್ನಿಚರ್‌ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಎನ್ಐಎ ಅಧಿಕಾರಿಗಳು ಹಾಗೂ ಅಸ್ಸಾಂ ಪೊಲೀಸರು, ಸೆ.24ರಂದು ಬೆಂಗಳೂರಿಗೆ ಬಂದು ಸ್ಥಳೀಯ ಪೊಲೀಸರ ನೆರವು ಪಡೆದು ಆತ ಕೆಲಸ ಮಾಡುತ್ತಿದ್ದ ಕಾರ್ಖಾನೆ ಬಳಿಯೇ ಗಿರೀಶ್‌ನನ್ನು ಬಂಧಿಸಿದ್ದಾರೆ.

ಬೆಂಗಳೂರಿಗೆ ಏಕೆ ಬಂದ?

ಶಂಕಿತ ಉಗ್ರ ಗಿರೀಶ್ ಪತ್ನಿ ಮತ್ತು ಮತ್ತೊಬ್ಬ ಶಂಕಿತ ಉಗ್ರ ಅಭಿಷೇಕ್ ಪತ್ನಿ ಬಾಲ್ಯ ಸ್ನೇಹಿತರು. ಹೀಗಾಗಿ ಗಿರೀಶ್ ಮತ್ತು ಅಭಿಷೇಕ್ ಸಹ ಸ್ನೇಹಿತರಾಗಿದ್ದರು. ಅಭಿಷೇಕ್ ಪತ್ನಿ ಜಿಗಣಿಯಲ್ಲಿ ನೆಲೆಸಿದ್ದು, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಅಭಿಷೇಕ್, ಗಿರೀಶ್‌ಗೆ ₹5 ಲಕ್ಷ ನೀಡಿ ಅಸ್ಸಾಂನಲ್ಲಿ 10 ಕಡೆ ಐಇಡಿ ಸ್ಫೋಟಕ ಇರಿಸುವಂತೆ ಸೂಚಿಸಿದ್ದ. ಅದರಂತೆ ಗಿರೀಶ್ ಐಇಡಿ ಇರಿಸಿದ್ದ. ಆದರೆ, ಸ್ಫೋಟದ ಸಂಚು ವಿಫಲವಾಯಿತು. ಬಳಿಕ ಎನ್ಐಎ ಅಭಿಷೇಕ್‌ನನ್ನು ಬಂಧಿಸಿದ ವಿಚಾರ ತಿಳಿದು ಬೆದರಿದ ಗಿರೀಶ್, ಅಭಿಷೇಕ್ ಪತ್ನಿಯ ಸಹಾಯ ಪಡೆದು ಕುಟುಂಬ ಸಮೇತ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಪಘಾತ: ಗಾಯಾಳು ಬೈಕ್‌ ಸವಾರ ಸಾವು
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಬೈಕ್ ಸವಾರ ಸಾವು; ಇಬ್ಬರಿಗೆ ಗಾಯ