ದುಷ್ಕರ್ಮಿಗಳಿಂದ ಕಾರ್ಮಿಕನ ಕತ್ತು ಸೀಳಿ ಹತ್ಯೆ

KannadaprabhaNewsNetwork | Published : Nov 8, 2023 1:00 AM

ಸಾರಾಂಶ

ದುಷ್ಕರ್ಮಿಗಳಿಂದ ಕಾರ್ಮಿಕನ ಕತ್ತು ಸೀಳಿ ಹತ್ಯೆಹಣಕಾಸಿನ ವಿಚಾರವೇ ಕೊಲೆಗೆ ಕಾರಣವೆಂಬ ಶಂಕೆ

- ಹಣಕಾಸಿನ ವಿಚಾರವೇ ಕೊಲೆಗೆ ಕಾರಣವೆಂಬ ಶಂಕೆಕನ್ನಡಪ್ರಭ ವಾರ್ತೆ ಭಾರತೀನಗರ

ಹಣಕಾಸಿನ ವಿಚಾರವಾಗಿ ಕಟ್ಟಡ ನಿರ್ಮಾಣ ಕಾರ್ಮಿಕನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ.

ಮೆಳ್ಳಹಳ್ಳಿ ಗ್ರಾಮದ ಮಂಟೇಸ್ವಾಮಿ (೩೬) ಹತ್ಯೆಗೀಡಾದ ವ್ಯಕ್ತಿ. ಕತ್ತು ಕೊಯ್ದ ಸ್ಥಿತಿಯಲ್ಲಿ ಮೃತದೇಹ ಮಂಡ್ಯ ರಸ್ತೆಯಲ್ಲಿ ಪತ್ತೆಯಾಗಿದೆ.

ಬಾರ್ ಬೇಂಡಿಗ್ ಕೆಲಸ ಮಾಡುತ್ತಿದ್ದ ಕಬ್ಬನಹಳ್ಳಿ ರವಿ ನಡುವೆ ಕೆಲ ದಿನಗಳ ಹಿಂದೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿತ್ತು.

ಸೋಮವಾರ ಮಧ್ಯಾಹ್ನ ಮನೆಯಲ್ಲಿದ್ದ ಮಂಟೇಸ್ವಾಮಿಯನ್ನು ರವಿ ಸ್ವಲ್ಪ ಮಾತಾಡಬೇಕಿದೆ ಬಾ ಎಂದು ಕರೆದಿದ್ದಾನೆ. ಆದರೆ, ಅವರ ಜೊತೆ ಹೋಗಬೇಡಿ. ಅವರು ಸರಿಯಿಲ್ಲ ಎಂದು ಮಂಟೇಸ್ವಾಮಿ ಹೋಗುವುದನ್ನು ಆತನ ಪತ್ನಿ ತಡೆದಿದ್ದಾರೆ. ಆದರೂ ಸಹ ರವಿ ಜೊತೆ ಮಂಟೇಸ್ವಾಮಿ ಮಧ್ಯಾಹ್ನ ೩ ಗಂಟೆಯ ಸಮಯದಲ್ಲಿ ಮನೆಯಿಂದ ತೆರಳಿದ್ದಾನೆ.

ಆದರೆ, ಮನೆಯಿಂದ ಹೊರ ಹೋದ ಅರ್ಧ ಗಂಟೆಯಲ್ಲಿ ಆತನ ಪೋನನ್ನು ಸ್ವಿಚ್ ಆಫ್ ಮಾಡಲಾಗಿದೆ. ರಾತ್ರಿಯಾದರೂ ಮನೆಗೆ ಬಾರದ ಮಂಟೇಸ್ವಾಮಿಗಾಗಿ ಆತನ ಕುಟುಂಬಸ್ಥರು ಹಾಗೂ ಗೆಳೆಯರು ಎಲ್ಲೆಡೆ ಹುಡುಕಾಟ ನಡೆಸಿದರು. ಆದರೂ ಆತನ ಸುಳಿವು ಪತ್ತೆಯಾಗಲೇ ಇಲ್ಲ.

ಮಂಗಳವಾರ ಬೆಳ್ಳಂಬೆಳಗ್ಗೆ ಮನೆಯವರು ಹುಡುಕಿಕೊಂಡು ಹೋದಾಗ ಕೆ.ಎಂ.ದೊಡ್ಡಿ-ಮಂಡ್ಯ ರಸ್ತೆಯ ಸಾಮಿಲ್ ಬಳಿ ಮಂಟೇಸ್ವಾಮಿಯ ಬೈಕ್ ಬಿದ್ದಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಡಿದಾಗ ಅನತಿ ದೂರದಲ್ಲಿ ಮೃತದೇಹ ಕಂಡುಬಂದಿತು.

ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆ ಮಾಡಿದ್ದು, ಹಣಕಾಸಿನ ವಿಚಾರವಾಗಿ ಜಗಳ ನಡೆದಿದ್ದ ದ್ವೇಷದ ಹಿನ್ನೆಲೆಯಲ್ಲಿ ದುಷ್ಕೃತ್ಯ ನಡೆದಿರಬಹುದು. ಪರಿಚಿತ ಕಬ್ಬನಹಳ್ಳಿ ರವಿ ಕೊಲೆಗೈದು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.

ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮೃತ ದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು. ಮೃತನ ಮನೆಯವರು ನೀಡಿದ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Share this article