ಪ್ರೇಯಿಸಿ ಬಿಟ್ಟು ಹೋಗಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆಗೆ ಶರಣು!

KannadaprabhaNewsNetwork | Updated : Feb 09 2024, 12:37 PM IST

ಸಾರಾಂಶ

ಒಂದೇ ಮನೆಯಲ್ಲಿ ಸಹಜೀವನದಲ್ಲಿದ್ದ ವಿಚ್ಛೇದಿತ ಮಹಿಳೆ ಬಿಟ್ಟುಹೋಗಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದೇ ಮನೆಯಲ್ಲಿ ಸಹಜೀವನದಲ್ಲಿದ್ದ ವಿಚ್ಛೇದಿತ ಮಹಿಳೆ ಬಿಟ್ಟುಹೋಗಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಅನ್ಬು ಅರಸನ್‌ (24) ಆತ್ಮಹತ್ಯೆ ಮಾಡಿಕೊಂಡವ. ಜ.18ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೃತನ ಪ್ರೇಯಸಿ ವಿದ್ಯಾ(24) ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಏನಿದು ಪ್ರಕರಣ?
ಆತ್ಮಹತ್ಯೆಗೆ ಶರಣಾದ ಅನ್ಬು ಅರಸನ್‌ ಪರಪ್ಪನ ಅಗ್ರಹಾರ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪತಿಯಿಂದ ವಿಚ್ಛೇದನ ಪಡೆದಿದ್ದ ವಿದ್ಯಾ ಸಹ ಅನ್ಬು ಕಂಪನಿಯ ಪಕ್ಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ಈ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿ ಬಳಿಕ ಆತ್ಮೀಯತೆ ಬೆಳೆದು ಪ್ರೀತಿಸಲು ಆರಂಭಿಸಿದ್ದರು. ಕಳೆದೊಂದು ವರ್ಷದಿಂದ ರಾಯಸಂದ್ರದ ಬಾಡಿಗೆ ಮನೆಯಲ್ಲಿ ಸಹಜೀವನದಲ್ಲಿ ಇದ್ದರು.

ಈ ನಡುವೆ ವಿದ್ಯಾ ತನ್ನ ಸಹೋದ್ಯೋಗಿಗಳ ಜತೆಗೆ ಮಾತನಾಡಿದರೂ ಅನ್ಬು ಸಹಿಸುತ್ತಿರಲಿಲ್ಲ. ಬೇರೆಯವರ ಜತೆಗೆ ಮಾತನಾಡದಂತೆ ಎಚ್ಚರಿಕೆ ನೀಡುತ್ತಿದ್ದ. 

ಒಂದು ವೇಳೆ ಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡಿದರೆ ಅವರ ಎದುರೇ ಅವಮಾನಿಸುತ್ತಿದ್ದ. ಈತನ ವರ್ತನೆಯಿಂದ ಬೇಸರಗೊಂಡಿದ್ದ ವಿದ್ಯಾ, ಅನ್ಬುನಿಂದ ದೂರವಾಗಿದ್ದಳು.

ಪ್ರೇಯಸಿ ದೂರವಾದ ಹಿನ್ನೆಲೆಯಲ್ಲಿ ಅನ್ಬು ಮನನೊಂದು ಜ.18ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪೋಷಕರು ನೀಡಿದ ದೂರಿನ ಮೇರೆಗೆ ವಿದ್ಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article