ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಬಿಎಂಟಿಸಿ ಬಸ್ ಪ್ರಯಾಣದ ವೇಳೆ ಕಿಟಕಿ ತೆಗೆಯುವ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳವಾಗಿ ಪರಸ್ಪರ ಶೂ-ಚಪ್ಪಲಿಗಳಲ್ಲಿ ಹೊಡೆದಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಮೆಜೆಸ್ಟಿಕ್-ಪೀಣ್ಯ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಬಸ್‌ನ ಕಿಟಕಿ ತೆಗೆಯುವ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆದಿದೆ.
ಈ ವೇಳೆ ಕೋಪೋದ್ರಿಕ್ತಳಾದ ಮಹಿಳೆ ಏಕಾಏಕಿ ತನ್ನ ಶೂ ಕಳಚಿ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಮಹಿಳೆ ತನ್ನ ಚಪ್ಪಲಿ ಕಳಚಿ ಶೂನಲ್ಲಿ ಹಲ್ಲೆ ಮಾಡಿದ ಮಹಿಳೆಗೆ ಹೊಡೆದಿದ್ದಾರೆ.
ಹೀಗೆ ಇಬ್ಬರು ಮಹಿಳೆಯರು ಕೆಲ ಕಾಲ ಪರಸ್ಪರ ಶೂ-ಚಪ್ಪಲಿಯಲ್ಲಿ ಬಡಿದಾಡಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ಹಾಗೂ ಬಸ್‌ನ ನಿರ್ವಾಹಕರು ಮಧ್ಯ ಪ್ರವೇಶಿಸಿ ಇಬ್ಬರು ಮಹಿಳೆಯರಿಗೂ ತಿಳಿ ಹೇಳಿ ಸಮಾಧಾನಪಡಿಸಿದ್ದಾರೆ.
ಈ ಚಪ್ಪಲಿ ಕಾಳಗದ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.