ಕೆ.ಎಂ.ದೊಡ್ಡಿ:
ಹೆಬ್ಬಾಳದಲ್ಲಿ ಈಜಲು ಹೋದ ಯುವಕ ಮುಳುಗಿ ಸಾವನ್ನಪ್ಪಿರುವ ಘಟನೆ ಸಮೀಪದ ಚಿಕ್ಕಅರಸಿನಕೆರೆ ಗ್ರಾಮದ ಶ್ರೀಕಾಲಭೈರವೇಶ್ವರ ದೇವಸ್ಥಾನದ ಬಳಿ ಸೋಮವಾರ ನಡೆದಿದೆ.ಮಳವಳ್ಳಿ ತಾಲೂಕು ಬಾಣಸಮುದ್ರ ಗ್ರಾಮದ ಚಂದ್ರಶೇಖರ್ (24) ಸಾವನ್ನಪ್ಪಿದವರು.
ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಅವರು ತಮ್ಮ ಮನೆ ದೇವರು ಚಿಕ್ಕಅರಸಿನಕೆರೆ ಗ್ರಾಮದ ಶ್ರೀಕಾಲಭೈರವೈಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದರು.ಈ ವೇಳೆ ದೇಗುಲದ ಪಕ್ಕದಲ್ಲಿರುವ ಹೆಬ್ಬಾಳದಲ್ಲಿ ಈಜಲು ಹೋದ ಚಂದ್ರಶೇಖರ್ ದಡಕ್ಕೆ ಹೋಗಿ ವಾಪಸ್ ಬರುವ ವೇಳೆ ಮಧ್ಯದಲ್ಲಿ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಅಗ್ನಿಶಾಮಕದಳ ಹಾಗೂ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಮೂಲಕ ಯುವಕನ ಶವ ಹೊರ ತೆಗೆದಿದ್ದಾರೆ.
ಅಗ್ನಿಶಾಮಕ ಠಾಣೆ ಸಹಾಯಕ ಠಾಣಾಧಿಕಾರಿ ವಿ.ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಬೋಟ್ ಸಹಾಯದಿಂದ ಸಿಬ್ಬಂದಿಗಳಾದ ವಿಜಯಕುಮಾರ್, ಮಾದೇಗೌಡ, ಹನುಮಂತಪ್ಪ, ರಾಜು, ಅಭಿನಂದನ್, ವಿನಯ್ ಅವರ ತಂಡ ಸುಮಾರು 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯುವಕನ ಶವವನ್ನು ಹೆಬ್ಬಾಳದ ಮಧ್ಯದಲ್ಲಿ ಮುಳುಗಿದ್ದ ಯುವಕನ ಶವ ಹೊರ ತೆಗೆದರು.
ನಂತರ ಭಾರತೀನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಯುವಕನ ಶವ ಸಾಗಿಸಿ ಪಂಚನಾಮೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಈ ವೇಳೆ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಕಲ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಾಪತ್ತೆಯಾಗಿದ್ದ ಯುವಕ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಶ್ರೀರಂಗಪಟ್ಟಣ:
ನಿಗೂಢವಾಗಿ ಕಾಣೆಯಾಗಿದ್ದ ಯುವಕ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಪಟ್ಟಣದ ಗಂಜಾಂನಲ್ಲಿ ನಡೆದಿದೆ. ತಾಲೂಕಿನ ಹುಣಸನಹಳ್ಳಿ ಪವನ್ (28) ಏ.2 ನಾಪತ್ತೆಯಾಗಿದ್ದನು. ಈ ಬಗ್ಗೆ ಕುಟುಂಬಸ್ಥರು ಅರೆಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಭಾನುವಾರ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಂನ ಗಿಡಂಗಿ ಹೊಳೆ ಬಳಿಯ ಕಾವೇರಿ ನದಿಯಲ್ಲಿ ಪವನ್ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ದುಷ್ಕರ್ಮಿಗಳ ಗುಂಡಿನ ದಾಳಿಗೆ ನಾಯಿ ಬಲಿ: ಮನೆ ಕಿಟಕಿಗಳು ಜಖಂ
ಮಳವಳ್ಳಿ:ದುಷ್ಕರ್ಮಿಗಳು ಹಾರಿಸಿದ ಗುಂಡಿನ ದಾಳಿಗೆ ಮನೆಯ ಮುಂದೆ ಕಟ್ಟಲಾಗಿದ್ದ ನಾಯಿ ಸಾವನ್ನಪ್ಪಿದ್ದು, ಕಿಟಕಿಯ ಗಾಜುಗಳು ಜಖಂಗೊಂಡಿರುವ ಘಟನೆ ತಾಲೂಕಿನ ಶೆಟ್ಟಹಳ್ಳಿಯಲ್ಲಿ ಕಳೆದ ರಾತ್ರಿ ಜರುಗಿದೆ.
ಗ್ರಾಮದ ಹೊರವಲಯದ ರಾಚಯ್ಯರ ಪುತ್ರ ಶಿವಕುಮಾರ್ ಅವರಿಗೆ ಸೇರಿದ ಮನೆ ಬಳಿ ಮಧ್ಯರಾತ್ರಿ 1.30ರ ಸಮಯದಲ್ಲಿ ಮೂರು ಮಂದಿ ಮುಸುಕುದಾರರು ರಸ್ತೆಯಿಂದ ಮನೆ ಕಡೆಗೆ ಬರುವುದನ್ನು ಗಮನಿಸಿದ ನಾಯಿ ಜೋರಾಗಿ ಬೊಗಳಲು ಆರಂಭಿಸಿದೆ. ನಾಯಿ ಬೊಗಳಿಕೆಯಿಂದ ಎಚ್ಚರಗೊಂಡ ಮನೆ ಸದಸ್ಯರು ಕಿಟಕಿ ಮೂಲಕ ಹೊರಗೆ ನೋಡಿದಾಗ ಮೂರು ಮಂದಿ ನಿಂತಿರುವುದು ಕಂಡು ಬಂದಿದೆ. ನಾಯಿ ಮೇಲೆ ಕೋಪಗೊಂಡ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಸಾಯಿಸಿದ್ದಾರೆ. ಮನೆ ಒಳಗೆ ಇದ್ದ ಶಿವಕುಮಾರ್ ಮತ್ತು ಕುಟುಂಬದ ಸದಸ್ಯರು ಜೋರಾಗಿ ಚೀರಾಟ ನಡೆಸಿದಾಗ ಮನೆ ಮೇಲೂ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.ಮಾಹಿತಿ ತಿಳಿದ ಪೊಲೀಸರು ತಕ್ಷಣದಲ್ಲಿಯೇ ಆಗಮಿಸಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಶೋಭರಾಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಯಶ್ವಂತಕುಮಾರ್, ಸಿಪಿಐ ಬಸವರಾಜ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.