ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಪ್ರಸಾದಹಳ್ಳಿಯ ಮಂಜುನಾಥ್ ಪುತ್ರಿ ಸಿಂಚನ (24) ಆತ್ಮಹತ್ಯೆ ಮಾಡಿಕೊಂಡವರು. ಘಟನೆಗೆ ಸಂಬಂಧಿಸಿದಂತೆ ಆಕೆಯ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ತೀವ್ರ ಶೋಧಾಕಾರ್ಯ ಮುಂದುವರೆದಿದೆ.
ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಯುವತಿ ನದಿಗೆ ಹಾರಿದ್ದನ್ನು ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಸ್ಥಳದಲ್ಲಿದ್ದ ಆಕೆಯ ವ್ಯಾನಿಟಿ ಬ್ಯಾಗ್ ಹಾಗೂ ಮೊಬೈಲ್ ನಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕುಟುಂಬ ಸದಸ್ಯರು ದೃಢಪಡಿಸಿದ್ದರು.ಯುವತಿ ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ಹುಡುಕಾಟ ನಡೆಸಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಹುಡುಕಾಟಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆಯಾಗುತ್ತಿದೆ. ಹತ್ತಾರು ಕಿ.ಮೀ ವರೆಗೂ ಹುಡುಕಾಟ ನಡೆಸಿದ್ದರೂ ಯುವತಿ ಇನ್ನೂ ಶವ ಪತ್ತೆಯಾಗಿಲ್ಲ.
ನೀರಿನ ಸೆಳೆತ ಜೋರಾಗಿರುವ ಕಾರಣ ದೇಹವು ತುಂಬಾ ದೂರ ಕೊಚ್ಚಿಕೊಂಡು ಹೋಗಿರಬಹುದು ಎನ್ನಲಾಗಿದೆ. ಮೊನ್ನೆಯಷ್ಟೇ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಕಾಲುಜಾರಿ ಸೇತುವೆಯಿಂದ ನದಿಗೆ ಜಾರಿ ಬಿದ್ದಿದ್ದ ಮೈಸೂರಿನ ಆಟೋ ಚಾಲಕನ ಶವವೂ ಕೂಡ ಇದುವರೆವಿಗೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.