ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡಪ್ರಭ ಸಿಬ್ಬಂದಿಯೊಬ್ಬರ ಡಿಆಕ್ಟಿವ್ (ನಿಷ್ಕ್ರಿಯತೆ) ಹೊಸ ಕ್ರೆಡಿಟ್ ಕಾರ್ಡ್‌ ಅನ್ನು ಬಳಸಿ 1.07 ಲಕ್ಷ ರು. ಹಣವನ್ನು ಸೈಬರ್ ವಂಚಕರು ದೋಚಿರುವ ಘಟನೆ ನಡೆದಿದೆ.

ಕನ್ನಡಪ್ರಭದ ಹಿರಿಯ ವಿನ್ಯಾಸಕಾರ ಕೆ.ಟಿ. ಸುರೇಶ್ ಕುಮಾರ್ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಸುರೇಶ್ ಅವರ ಕ್ರೆಡಿಟ್ ಕಾರ್ಡ್‌ ಬಳಸಿ ಹಣ ದೋಚಿದ ಕೃತ್ಯ ನಡೆದು ಎರಡು ದಿನಗಳ ಬಳಿಕ ಬ್ಯಾಂಕ್‌ನಿಂದ ಬಿಲ್ ಬಂದಾಗಲೇ ಈ ವಂಚನೆ ಗೊತ್ತಾಗಿದೆ.

ಎಸ್‌ಬಿಐ ಬ್ಯಾಂಕ್‌ನ ವೀಸಾ ಕ್ರೆಡಿಟ್ ಕಾರ್ಡ್‌ಗೆ ಕೋರಿಕೆ ಸಲ್ಲಿಸಿದ್ದು, ಮಾ.3 ರಂದು ನನ್ನ ವಿಳಾಸಕ್ಕೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಂದಿತ್ತು. ಆದರೆ ಕೇಳಿದ್ದು ವೀಸಾ ಕಾರ್ಡ್ ಕೈಗೆ ಬಂದಿದ್ದು ಮಾಸ್ಟರ್ ಕಾರ್ಡ್ ಆಗಿತ್ತು. ಈ ಲೋಪದ ಬಗ್ಗೆ ಪ್ರಶ್ನಿಸಿ ಬ್ಯಾಂಕ್‌ಗೆ ಇ.ಮೇಲ್ ಮೂಲಕ ಕಾರ್ಡ್ ಬದಲಾವಣೆಗೆ ಕೋರಿಕೆ ಸಲ್ಲಿಸಿದ್ದೆ. ಅಲ್ಲದೆ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಆಕ್ಟಿವ್ ಸಹ ಮಾಡಿರಲಿಲ್ಲ. ಮಾ.9 ರಂದು ಹೆಸರು ಮತ್ತು ಅಡ್ರೆಸ್‌ ಅಪ್ಡೆಟ್ ಮಾಡುವುದಾಗಿ ಬ್ಯಾಂಕ್‌ನಿಂದ ಮರು ಉತ್ತರ ಬಂತು.

ಆದರೆ ಮಾ.11 ರಂದು ಮಧ್ಯಾಹ್ನ ಮೊದಲು 36,231 ರು, ನಂತರ 36,135 ರು. ಹೀಗೆ ಹಂತ ಹಂತವಾಗಿ ಒಟ್ಟು 1.07 ಲಕ್ಷ ರು. ಹಣವು ಸ್ವಿಗ್ಗಿ ಲಿಮಿಟೆಡ್‌ಗೆ ವರ್ಗಾವಣೆಯಾಗಿದೆ. ಇದಾದ ಎರಡು ದಿನಗಳ ಬಳಿಕ ಈ ಹಣ ವರ್ಗಾವಣೆ ಸಂಬಂಧ ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ನನಗೆ ಆಘಾತವಾಯಿತು ಎಂದು ದೂರಿನಲ್ಲಿ ಸುರೇಶ್ ವಿವರಿಸಿದ್ದಾರೆ.


ನಾನು ಕ್ರೆಡಿಟ್‌ ಕಾರ್ಡ್ ಅನ್ನು ಆಕ್ಟಿವ್ ಮಾಡದೆ ಇದ್ದರೂ ಆ ಕಾರ್ಡ್ ಬಳಸಿ ಕಿಡಿಗೇಡಿಗಳು ಹಣ ದೋಚಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ಅವರು ಆಗ್ರಹಿಸಿದ್ದಾರೆ.