ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ನೇಹಿತನ ಐಷಾರಾಮಿ ಬೈಕ್ ಟೆಸ್ಟ್ ಡ್ರೈವ್ ಮಾಡುವಾಗ ರಸ್ತೆ ವಿಭಜಕಕ್ಕೆ ಗುದ್ದಿ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತಿಕೆರೆ ನಿವಾಸಿ ಅನಿಲ್ ಕುಮಾರ್ (29) ಮೃತ ಯುವಕ. ಜೆ.ಪಿ.ಪಾರ್ಕ್ ಸಮೀಪ ಶುಕ್ರವಾರ ರಾತ್ರಿ ತನ್ನ ಸ್ನೇಹಿತನ ರೋನ್ ಬೈಕನ್ನು ಅನಿಲ್ ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಅತಿವೇಗವಾಗಿ ಬಂದು ರಸ್ತೆ ವಿಭಜಕಕ್ಕೆ ಗುದ್ದಿಸಿದ್ದಾನೆ. ಘಟನೆಯಲ್ಲಿ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಸಮೀಪದ ನಿವಾಸಿ ಅನಿಲ್, ನಗರದಲ್ಲಿ ಸ್ವಿಗ್ಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಗೆಳೆಯರ ಜತೆ ಮತ್ತಿಕೆರೆ ಬಳಿ ರೂಂನಲ್ಲಿ ಆತ ವಾಸವಾಗಿದ್ದ. ಇತ್ತೀಚೆಗೆ ಅನಿಲ್ ಸ್ನೇಹಿತ ರೋನ್ ಬೈಕ್ ಖರೀದಿಸಿದ್ದ. ಜೆ.ಪಿ.ನಗರ ಪಾರ್ಕ್ ಬಳಿ ಶುಕ್ರವಾರ ರಾತ್ರಿ ಎಲ್ಲ ಸ್ನೇಹಿತರು ಕಲೆತಿದ್ದರು. ಆ ವೇಳೆ ಗೆಳೆಯನ ಬಳಿ ಒಂದು ಸುತ್ತು ಬೈಕ್‌ನಲ್ಲಿ ಹೋಗಿ ಬರುವುದಾಗಿ ಹೇಳಿ ಅನಿಲ್ ಪಡೆದಿದ್ದಾನೆ. ಆಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೈಕ್‌ಗೆ ಕಾರು ಡಿಕ್ಕಿ: ಹಿಂಬದಿ ಸವಾರ ಸಾವು
ಕಿಕ್ಕೇರಿ: ಕಾರು ಬೈಕ್ ಗೆ ಡಿಕ್ಕಿಯಾಗಿ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಗಾಂಧಿ ನಗರದ ಬಳಿ ಶನಿವಾರ ನಡೆದಿದೆ.
ಹೋಬಳಿಯ ಮಾಣಿಕನಹಳ್ಳಿ ಶಿವರಾಂ (63) ಮೃತಪಟ್ಟ ಬೈಕ್ ಸವಾರ. ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿ ತನ್ನ ಪಕ್ಕದ ಊರಿನ ಲಿಂಗಾಪುರದ ಯೋಗೇಶ್ ಜೊತೆ ಗ್ರಾಮಕ್ಕೆ ವಾಪಸ್ ಬರುತ್ತಿದ್ದ ವೇಳೆ ಗಾಂಧಿನಗರ ತಿರುವು ಬಳಿ ಎದುರು ಬದಿಯಿಂದ ಕೆ.ಆರ್.ಪೇಟೆ ಕಡೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಪರಿಣಾಮ ಬೈಕ್ ಹಿಂಬದಿಯಲ್ಲಿದ್ದ ಸವಾರನ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಬೈಕ್ ಸವಾರ ಲಿಂಗಾಪುರ ಗ್ರಾಮದ ಯೋಗೇಶ್‌ನಿಗೆ ಗಂಭೀರ ಗಾಯವಾಗಿದ್ದು, ತುರ್ತು ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಮರಣೋತ್ತರ ಪರೀಕ್ಷೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು .ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ ದೂರು ದಾಖಲಿಸಿಕೊಂಡು ಕಾರನ್ನು ಪೊಲೀಸರು ವಶಕ್ಕೆ ಪಡೆದು ತನಿಖಾ ಕೈಗೊಂಡಿದ್ದಾರೆ.