ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಇಬ್ಬರು ಸಾವು, ಓರ್ವನಿಗೆ ತೀವ್ರ ಗಾಯ

KannadaprabhaNewsNetwork | Updated : Jan 14 2024, 02:30 PM IST

ಸಾರಾಂಶ

ಬೆಂಗಳೂರಿನ ಐಸಿಐಸಿ ಕಂಪನಿಯ ಮೂರು ಉದ್ಯೋಗಿಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಡಿಕ್ಕಿ ಹೊಡೆದ ರಭಸಕ್ಕೆ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿದ್ದ ಸಿಸಿ ಕ್ಯಾಮೆರಾ ಧ್ವಂಸ, ಪೊಲೀಸ್ ಬ್ಯಾರಿ ಕೇಟ್‌ಗಳು ನಾಶ. ಮೂವರು ಮೈಸೂರಿನಿಂತ್ಬೆಂಗಳೂರಿಗೆ ಬರುತ್ತಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಓರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಹೊರ ವಲಯದ ಕೆ.ಕೋಡಿಹಳ್ಳಿ ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಜರುಗಿದೆ.

ಐಸಿಐಸಿ ಕಂಪನಿ ಪ್ರಾದೇಶಿಕ ಅಧಿಕಾರಿ ಸೇರಿದಂತೆ ಮೂವರು ಉದ್ಯೋಗಿಗಳು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಸುಮಾರು 1 ಲಕ್ಷ ರು. ಮೌಲ್ಯದ ಸಿಸಿ ಕ್ಯಾಮೆರಾ ಧ್ವಂಸ ಗೊಂಡಿದೆ. ಅಲ್ಲದೇ, ಹಲವು ಪೊಲೀಸ್ ಬ್ಯಾರಿ ಕೇಟ್‌ಗಳು ನಾಶವಾಗಿವೆ.

ಬೆಂಗಳೂರಿನ ಜೆಪಿ ನಗರದಲ್ಲಿರುವ ಐಸಿಐಸಿ ಹೋಮ್ ಫೈನಾನ್ಸ್ ಕಂಪನಿ ರೀಜನಲ್ ಬಿಜಿನೆಸ್ ಮ್ಯಾನೇಜರ್ ಎಚ್.ಎ.ಶಂಕರ್ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕಂಪನಿ ಫೈನಾನ್ಸ್ ವಿಭಾಗದ ಮಹದೇವ್ ತಿರೂರು (37) ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ.

ವಿಜಯ್ ಬ್ಯಾಂಕ್ ಮ್ಯಾನೇಜರ್ ಕಿಶೋರ್ ಸಹ ತೀವ್ರವಾಗಿ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾ ಆಸ್ಪತ್ರೆ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆ ಸ್ಮಾರ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ರೀಜನಲ್ ಮ್ಯಾನೇಜರ್ ಶಂಕರ್ ಮೂಲತಃ ಕೆಆರ್ ಪೇಟೆ ತಾಲೂಕು ಹೆಮ್ಮನಹಳ್ಳಿ ಹಾಗೂ ಮಹದೇವ್ ತಿರೂರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಿವಾಸಿಗಳು. ಗಾಯಾಳು ಕಿಶೋರ್ ಕೋಲಾರ ಜಿಲ್ಲೆಯ ವೇಮಗಲ್ ತಾಲೂಕು ಶೆಟ್ಟಿಹಳ್ಳಿಯವರು.

ಮೃತರು ಮತ್ತು ಗಾಯಾಳು ಮೈಸೂರಿನಲ್ಲಿ ಶುಕ್ರವಾರ ನಡೆದ ಐಸಿಐಸಿ ಕಂಪನಿ ಸಭೆಯಲ್ಲಿ ಪಾಲ್ಗೊಂಡ ನಂತರ ತಮ್ಮ ಮಹೇಂದ್ರ ಸ್ಕಾರ್ಪಿಯೊ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಮುಂಜಾನೆ 4:45 ರ ಸುಮಾರಿಗೆ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆ.ಕೋಡಿಹಳ್ಳಿ ಬಳಿ ಶಂಕರ್ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ನಂತರ ವಿಭಜಕದ ಮಧ್ಯ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗೆ ಹೊಡೆದು ಜಖಂಗೊಳಿಸಿದ ಬಳಿಕ ಕಾರು ಮೈಸೂರು ಮಾರ್ಗದ ರಸ್ತೆಯಿಂದ ಹಾರಿ ಬೆಂಗಳೂರು ಕಡೆಯ ತಡೆಗೋಡೆಗೆ ಗುದ್ದಿ ಅಪಘಾತಕ್ಕೀಡಾಗಿದೆ.

ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪಿಎಸ್ಐ ಜೆಇ ಮಹೇಶ್ ಹಾಗೂ 20 ಮಂದಿ ಸಿಬ್ಬಂದಿ ಕಾರಿನಲ್ಲಿ ಸಿಲುಕಿದ್ದ ಮೃತರ ಶವ ಮತ್ತು ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡರು.

ಎಎಸ್‌ಪಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ವೆಂಕಟೇಗೌಡ ಅಪಘಾತಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಪೈಕಿ ಶಂಕರ್ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪರಣೋತ್ತರ ಪರೀಕ್ಷೆ ನಂತರ ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು. ಮಹದೇವ್ ಶಿರೂರು ಸಂಬಂಧಿಕರು ಆಗಮಿಸುವುದು ವಿಳಂಬವಾಗಿರುವ ಕಾರಣ ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share this article