ಕನ್ನಡಪ್ರಭ ವಾರ್ತೆ ಮದ್ದೂರು
ಬೆಂಗಳೂರು ಹೆಗ್ಗನಹಳ್ಳಿಯಲ್ಲಿ ವಾಸವಾಗಿರುವ ಮುತ್ತುರಾಜ್ (35), ಆತನ ಪತ್ನಿ ಕಾವ್ಯ (30), ಪುತ್ರಿ ಕೀರ್ತನಾ (8) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಮತ್ತೊಂದು ಮಗು ಭುವನ 12 ಗಂಭೀರವಾಗಿ ಗಾಯಗೊಂಡು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮೃತರು ಮೂಲತಃ ರಾಮನಗರ ಜಿಲ್ಲೆಯ ಕನಕಪುರ ಟೌನ್ ನಿವಾಸಿಗಳಾಗಿದ್ದಾರೆ. ಮೃತ ಮುತ್ತುರಾಜು ಬೆಂಗಳೂರಿನ ಡಿಟಿಡಿಸಿ ಪಾರ್ಸಲ್ ಸರ್ವಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದವರೊಂದಿಗೆ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು.ಮುತ್ತುರಾಜನ ಅತ್ತೆ ಶಾಂತಮ್ಮ ಕೊಪ್ಪ ಗ್ರಾಮದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಕಾವ್ಯ ಮತ್ತು ಮಕ್ಕಳೊಂದಿಗೆ ಅತ್ತೆ ಮನೆಗೆ ಬಂದಿದ್ದ ಮುತ್ತುರಾಜು ಹಬ್ಬ ಮುಗಿದ ನಂತರ ಮಂಗಳವಾರ ಮುಂಜಾನೆ 5 ಗಂಟೆಗೆ ಕುಟುಂಬದವರೊಂದಿಗೆ ತಮ್ಮ ಟಿವಿಎಸ್ ಜುಪಿಟರ್ ಸ್ಕೂಟರ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೊಪ್ಪ ಠಾಣೆಯ ಪಿಎಸ್ಐ ಆರ್.ಬಿ.ಉಮೇಶ್ ಹಾಗೂ ಸಿಬ್ಬಂದಿ ಸಾರ್ವಜನಿಕರ ನೆರವಿನಿಂದ ಮೃತರು ಮತ್ತು ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ ಕುಮಾರ್, ಮದ್ದೂರು ಗ್ರಾಮಾಂತರ ಸಿಪಿಐ ನಾರಾಯಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಂತಮ್ಮರ ಮನೆಯಲ್ಲಿ ಸೂತಕದ ಛಾಯೆ
ತಾಲೂಕಿನ ಕೊಪ್ಪದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ 8 ವರ್ಷದ ಮಗು ಸೇರಿ ಮೂವರು ಮೃತಪಟ್ಟ ಕುಟುಂಬದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
ಅಳಿಯ, ಮಗಳು, ಮೊಮ್ಮೊಗಳನ್ನು ಕಳೆದಕೊಂಡ ತಾಯಿ ಶಾಂತಮ್ಮ ಸೇರಿದಂತೆ ಮುತ್ತುರಾಜು ಅವರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟುತ್ತಿತ್ತು. ಸೋಮವಾರ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ ಕಾಯಕಕ್ಕೆ ತೆರಳುತ್ತಿದ್ದ ದಂಪತಿಗೆ ಹಾಲಿನ ಟ್ಯಾಂಕರ್ ಜವರಾಯನ ರೂಪದಲ್ಲಿ ಬಂದು ಅಪ್ಪಳಿಸಿ ಅಟ್ಟಹಾಸ್ಯ ಮೆರೆದಿದ್ದಾನೆ. ಬದುಕಿ ಬಾಳಬೇಕಾದ ಮೂವರ ಜೀವವನ್ನು ವಿಧಿ ಕಸಿದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ಮೇರೆಗೆ ನಾಗಮಂಗಲ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಮೃತರ ತಾಯಿ ಶಾಂತಮ್ಮರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.