ಕನ್ನಡಪ್ರಭ ವಾರ್ತೆ ಸಿರಿಗೆರೆಸಿರಿಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ-೪೮ರಲ್ಲಿ ಬರುವ ವಿಜಾಪುರ ಗೊಲ್ಲರಹಟ್ಟಿಯಲ್ಲಿ ಎಂದಿನಂತೆ ಕಾಲೇಜಿಗೆ ಹೊರಟು ನಿಂತಿದ್ದ ಸುಚಿತ್ರಾ (೧೮) ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ಅಪ್ಪಳಿಸಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿ ಮಸಣ ಸೇರಿದ ದಾರುಣ ಪ್ರಸಂಗ ನಡೆದಿದೆ.
ಇನ್ನು ಚಿತ್ರದುರ್ಗದಲ್ಲಿ ಪ್ರಥಮ ವರ್ಷದ ಐಟಿಐ ಓದುತ್ತಿರುವ ಯುವಕ ಎಂ.ಆದಿತ್ಯ ಅಪಘಾತದಲ್ಲಿ ಗಾಯಗೊಂಡಿದ್ದು, ಚಿತ್ರದುರ್ಗದ ಆಸ್ಪತ್ರೆಯೊಂದರಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.ಸುಚಿತ್ರಾ ಹಿರೇಕಂದವಾಡಿ ಗ್ರಾಮದ ಯುವತಿ. ವಿಜಾಪುರ ಗೊಲ್ಲರಹಟ್ಟಿ ಗ್ರಾಮದ ಸಂಬಂಧಿಕರೋರ್ವರ ಮನೆಯಲ್ಲಿದ್ದುಕೊಂಡು ಪದವಿ ತರಗತಿ ಓದುತ್ತಿದ್ದಳು. ಸುಚಿತ್ರಾ ಮತ್ತು ಆದಿತ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ ಬಸ್ಸಿಗಾಗಿ ಕಾದಿದ್ದಾರೆ. ಬಸ್ ಬಾರದೇ ಇದ್ದಾಗ ಹೆದ್ದಾರಿಯನ್ನು ದಾಟಿಕೊಂಡು ಮತ್ತೊಂದು ತುದಿಗೆ ಬಂದಿದ್ದಾರೆ. ಆಗಲೂ ಬಸ್ ಸಿಗದೆ ಪರಿತಪಿಸುತ್ತಿರುವಾಗ ಹಿಂದಿನಿಂದ ರಭಸವಾಗಿ ಬಂದ ಲಾರಿ ಯುವತಿಗೆ ಹೊಡೆದ ಪರಿಣಾಮವಾಗಿ ಅವಳು ಸ್ಥಳದಲ್ಲಿಯೇ ಅಸುನೀಗಿದ್ದಾಳೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಜನರು ಹೆದ್ದಾರಿಗೆ ಒಂದು ಗಂಟೆಗಿಂತಲೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅವಕಾಶ ನೀಡದೆ ಪ್ರತಿಭಟನೆ ನಡೆಸಿ ಘಟನೆ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರಿಂದ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿತ್ತು. ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಮಧ್ಯಸ್ಥಿಕೆ ವಹಿಸಿದ ಭರಮಸಾಗರ ಪೊಲೀಸ್ ಅಧಿಕಾರಿಗಳ ಮೇಲೆ ಸಾರ್ವಜನಿಕರು ಮುಗಿಬಿದ್ದ ಪ್ರಸಂಗವೂ ನಡೆಯಿತು.ಇನ್ನು, ಪ್ರಯಾಣಿಕರು ಸರ್ವಿಸ್ ರಸ್ತೆಯನ್ನು ಹಾಯ್ದುಕೊಂಡು ಹೆದ್ದಾರಿ ಮೇಲೆ ಬರಬೇಕು. ಅದು ಅಪಾಯಕ್ಕೆ ಆಹ್ವಾನಕೊಟ್ಟಂತೆಯೇ ಸರಿ. ಈ ಬಗ್ಗೆ ಹಲವು ಬಾರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗ ಮನವಿ ಮಾಡಿದ್ದರೂ, ಸೂಕ್ತ ಸೌಲಭ್ಯವನ್ನು ಕಲ್ಪಿಸಿಲ್ಲ ಎಂಬುದು ಗ್ರಾಮಸ್ಥರ ದೂರು.ತಹಸೀಲ್ದಾರ್ ನಾಗವೇಣಿ, ರಾಜ್ಯ ಸಾರಿಗೆ ಸಂಸ್ಥೆ ಡಿಪೋ ಮೇನೇಜರ್ ಹುಸೇನ್, ಹೆಚ್ಚುವರಿ ಎಸ್‌ಪಿ ಕುಮಾರಸ್ವಾಮಿ, ಅಬ್ದುಲ್ ಖಾದರ್, ಡಿವೈಎಸ್‌ಪಿ ಅನಿಲ್ ಕುಮಾರ್, ಭರಮಸಾಗರ ಪೊಲೀಸ್ ಇನ್ಸ್‌ಫೆಕ್ಟರ್ ರಮೇಶ್ ರಾವ್ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದರು.ಸಾರಿಗೆ ಸಂಸ್ಥೆ ಬಸ್ಸುಗಳೇ ವಿರಳ: ಚಿತ್ರದುರ್ಗ ಮತ್ತು ದಾವಣಗೆರೆ ಮಧ್ಯೆ ಸಂಚರಿಸುವ ಬಸ್ಸುಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಹೆದ್ದಾರಿಯಲ್ಲಿ ಚಲಿಸುವ ಬಹುತೇಕ ಬಸ್ಸುಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಿಲ್ಲಿಸುವುದೇ ಇಲ್ಲ. ಎರಡು ಜಿಲ್ಲೆಗಳ ಮಧ್ಯೆ ಸ್ನೇಹಮಯಿ ಬಸ್ಸುಗಳ ಸೌಲಭ್ಯವನ್ನು ಈ ಹಿಂದೆ ಒದಗಿಸ ಲಾಗಿತ್ತು. ಈಗ ಆ ಬಸ್ಸುಗಳ ಸಂಖ್ಯೆಯೂ ಈಗ ಗಣನೀಯವಾಗಿ ಕಡಿಮೆಯಾಗಿದೆ. ಗ್ರಾಮದ ಸಮೀಪ ಹಾಯ್ದು ಹೋಗುವ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಬಸ್ಸುಗಳ ಸಂಚಾರ ವಿರಳವಾಗಿದ್ದು, ಇದರಿಂದ ನಗರ ಪ್ರದೇಶದಲ್ಲಿ ಶಾಲಾ ಕಾಲೇಜಿಗೆ ನಿತ್ಯ ಪ್ರಯಾಣ ಮಾಡುವ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.