4 ವರ್ಷದಿಂದ ಕೋರ್ಟ್‌ಗೆ ಬಾರದ ಆರೋಪಿ ಬಂಧನ

KannadaprabhaNewsNetwork | Updated : Jun 03 2024, 05:50 AM IST

ಸಾರಾಂಶ

ಕೊಲೆಗೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿರುವುದು.

ಬೆಂಗಳೂರು: ಕೊಲೆಗೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗಮಂಗಲದ ಗಣೇಶ್‌ ಅಲಿಯಾಸ್‌ ಬಂಡೆ(39) ಬಂಧಿತ. ಆರೋಪಿಯು 2020ನೇ ಸಾಲಿನಲ್ಲಿ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದ. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆದರೆ, ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಮೂರು ಬಾರಿ ಸಮನ್ಸ್‌ ಹಾಗೂ 16 ಬಾರಿ ಬಂಧನ ವಾರೆಂಟ್‌ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕೆ ರಚಿಸಲಾಗಿದ್ದ ಪೊಲೀಸರ ವಿಶೇಷ ತಂಡ ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದಲ್ಲಿ ಗಣೇಶ್‌ ತಲೆಮರೆಸಿಕೊಂಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದೆ. ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.---

ಕೊಲೆ ಯತ್ನ ಕೇಸಲ್ಲಿ ಬೇಲ್‌ ಪಡೆದು ನಾಪತ್ತೆ ಆಗಿದ್ದವ ಸೆರೆ

ಬೆಂಗಳೂರು: ಕೊಲೆಗೆ ಯತ್ನ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೆ ಎರಡು ವರ್ಷದಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‌ನನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ಕೊಳಗೇರಿ ನಿವಾಸಿ ಮಣಿ ಅಲಿಯಾಸ್‌ ಕರಿಯಾ (27) ಬಂಧಿತ ರೌಡಿ. ಆರೋಪಿಯು 2016ರಲ್ಲಿ ಜೆ.ಪಿ.ನಗರ 1ನೇ ಹಂತದ ಸಾರಕ್ಕಿ ಗ್ರಾಮದಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆಗೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದ. ಬಳಿಕ ಷರತ್ತು ಬದ್ಧ ಜಾಮೀನು ಪಡೆದು ಬಿಡುಗಡೆಯಾಗಿದ್ದ. ನಂತರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿಗೊಳಿಸಿತ್ತು.

ಆರೋಪಿ ಮಣಿ ಬನಶಂಕರಿ ಕೊಳಗೇರಿಯಲ್ಲಿ ಅಜ್ಜಿಯ ಜತೆಗೆ ವಾಸವಿದ್ದ. ಅಜ್ಜಿ ತೀರಿದ ಹೋದ ಹಿನ್ನೆಲೆಯಲ್ಲಿ ಆ ಮನೆಯಲ್ಲಿ ಖಾಲಿ ಮಾಡಿದ್ದ. ಆಟೋ ಓಡಿಸಿಕೊಂಡಿದ್ದ ಆರೋಪಿಯು ರಾತ್ರಿ ವೇಳೆ ಆಟೋದಲ್ಲೇ ಮಲಗುತ್ತಿದ್ದ. ಇತ್ತೀಚೆಗೆ ಆರೋಪಿಯು ಮಡಿವಾಳದ ಸಿಲ್ಕ್‌ ಬೋರ್ಡ್‌ ಬಳಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಆರೋಪಿ ಮಣಿ ತಲಘಟ್ಟಪುರ ಪೊಲೀಸ್‌ ಠಾಣೆಯ ರೌಡಿ ಶೀಟರ್‌ ಆಗಿದ್ದಾನೆ. ಈತನ ವಿರುದ್ಧ ತಲಘಟ್ಟಪುರ, ಜೆ.ಪಿ.ನಗರ, ಬನಶಂಕರಿ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ 8 ಅಪರಾಧ ಪ್ರಕರಣಗಳು ದಾಖಲಾಗಿವೆ. ಎಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದು, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಯತ್ನ, ಸುಲಿಗೆ ಕೇಸ್‌:3 ವರ್ಷ ಬಳಿಕ ರೌಡಿ ಬಂಧನ

ಬೆಂಗಳೂರು: ಕೊಲೆಗೆ ಯತ್ನ ಸೇರಿದಂತೆ ವಿವಿಧ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಿರಿನಗರ ಠಾಣೆ ರೌಡಿ ಶೀಟರ್‌ ಕೆ.ಮಹೇಶ್‌(44) ಬಂಧಿತ. ಆರೋಪಿ ಹಲವು ವರ್ಷಗಳಿಂದ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದು, ಕೊಲೆಗೆ ಯತ್ನ, ಸುಲಿಗೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿ ಜಾಮೀನು ಪಡೆದು ಹೊರಗೆ ಬಂದು ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಬಂಧನ ವಾರೆಂಟ್‌ ಜಾರಿಗೊಳಿಸಿತ್ತು.

ಆರೋಪಿ ಮಹೇಶ್‌ನ ಬಂಧನಕ್ಕೆ ರಚಿಸಲಾಗಿದ್ದ ಪೊಲೀಸರ ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article