ಸಂತಾನ ಬೇಕು, ಪತಿಗೆ ಪೆರೋಲ್‌ ನೀಡಿ: ಕೋರ್ಟ್‌ಗೆ ಪತ್ನಿ ಮನವಿ

KannadaprabhaNewsNetwork |  
Published : Jun 03, 2024, 12:34 AM ISTUpdated : Jun 03, 2024, 05:11 AM IST
Karnataka High Court

ಸಾರಾಂಶ

ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತನ್ನ ಪತಿಯನ್ನು ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ವೆಂಕಟೇಶ್ ಕಲಿಪಿ

 ಬೆಂಗಳೂರು : ಕುಟುಂಬ ಸದಸ್ಯರನ್ನು ಕಾಣಲು, ಮದುವೆ, ಅನಾರೋಗ್ಯಕ್ಕೆ ಚಿಕಿತ್ಸೆ ಅಥವಾ ವಿವಾಹವಾಗಲು ಪರೋಲ್‌ ನೀಡುವಂತೆ ಸಜಾ ಬಂಧಿ ಅಥವಾ ಅವರ ಕುಟುಂಬಸ್ಥರು ಕೋರುವುದು ಸರ್ವೇ ಸಾಮಾನ್ಯ. ಇಲ್ಲೊಂದು ವಿಶೇಷ ಹಾಗೂ ಅಪರೂಪದ ಪ್ರಕರಣದಲ್ಲಿ ಸಂತಾನ ಪಡೆಯುವ ಸಲುವಾಗಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತನ್ನ ಪತಿಯನ್ನು ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.ವಿಶೇಷವೆಂದರೆ ಇದೇ ಮಹಿಳೆ ಪತಿಯನ್ನು ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬಂದು ಮದುವೆಯಾಗಿದ್ದರು. ಇದೀಗ ಸಂತಾನ ಪಡೆಯಲು ಪತಿಗೆ 90 ದಿನಗಳ ಕಾಲ ಪೆರೋಲ್‌ ನೀಡಲು ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಮಹಿಳೆಯ ಅರ್ಜಿ ಸೋಮವಾರವೇ (ಜೂ.3) ಹೈಕೋರ್ಟ್‌ನಲ್ಲಿ ವಿಚಾರಣೆಗೆ ನಿಗದಿಯಾಗಿದೆ. 

ಪೆರೋಲ್‌ ಪಡೆದು ಮದುವೆ:

ಕೊಲೆ ಪ್ರಕರಣವೊಂದರಲ್ಲಿ ಕೋಲಾರದ ಆನಂದ್‌ಗೆ ಜೀವಾವಧಿಶಿಕ್ಷೆ ವಿಧಿಸಿ 2019ರಲ್ಲಿ ಕೋಲಾರದ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆನಂದ್‌ ಹೈಕೋರ್ಟ್‌ಗೆ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿ 2023ರಲ್ಲಿ ತೀರ್ಪು ನೀಡಿತ್ತು. ಅಷ್ಟೊತ್ತಿಗಾಗಲೇ ಆನಂದ್‌ ಐದು ವರ್ಷ ಜೈಲು ಅನುಭವಿಸಿದ್ದರು.ಕೊಲೆ ಪ್ರಕರಣಕ್ಕಿಂತ ಮೊದಲು ಆನಂದ್‌ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಜೈಲಿಗೆ ಹೋಗಿ ಶಿಕ್ಷೆಯಾದ ನಂತರವೂ ಇಬ್ಬರ ನಡುವಿನ ಪ್ರೀತಿ ಎಳ್ಳಷ್ಟೂ ಕರಗಿರಲಿಲ್ಲ. ಬೇರೊಂದು ಯುವಕನನ್ನು ಮದುವೆಯಾಗಬೇಕೆಂಬ ಪೋಷಕರ ಒತ್ತಾಯಕ್ಕೆ ಆಕೆ ಮಣಿದಿರಲಿಲ್ಲ. ಇದರಿಂದ ಯುವತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಮದುವೆಯಾಗಲು ಆನಂದ್‌ನನ್ನು ಪೆರೋಲ್‌ ಮೇಲೆ ಬಿಡುಗಡೆಗೊಳಿಸುವಂತೆ ಕೋರಿದ್ದರು. ಮದುವೆಯಾಗಿ ವಾಪಸ್‌ ಜೈಲಿಗೆ:ಆ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್‌, ಅರ್ಜಿದಾರೆ ಯುವತಿಯನ್ನು ಮದುವೆಯಾಗಲು ಆನಂದ್‌ನನ್ನು 2023ರ ಮಾ.31ರಿಂದ ಏ.20ರವರೆಗೆ ಪೆರೋಲ್‌ ಮೇಲೆ ಬಿಡುಗಡೆಗೊಳಿಸಲು ಜೈಲು ಅಧಿಕಾರಿಗಳಿಗೆ 2023ರ ಮಾ.31ರಂದು ಆದೇಶಿಸಿತ್ತು. ಅದರಂತೆ ಏ.11ರಂದು ಮದುವೆಯಾಗಿದ್ದ ಆನಂದ್ ಮತ್ತು ಯುವತಿ, ವಿವಾಹ ನೋಂದಣಿ ಪತ್ರವನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು. ಆ ಬಳಿಕ ವೈವಾಹಿಕ ಜೀವನ ನಡೆಸಲು ಪೆರೋಲ್‌ ಅನ್ನು 60 ದಿನ ವಿಸ್ತರಿಸುವಂತೆ ಕೋರಿದ್ದರು. ಅದಕ್ಕೂ ಸಮ್ಮತಿಸಿದ್ದ ಹೈಕೋರ್ಟ್‌, ಪೆರೋಲ್‌ ಅವಧಿ ವಿಸ್ತರಿಸಿತ್ತು. ಪೆರೋಲ್‌ ಅವಧಿ ಪೂರ್ಣಗೊಂಡ ಕೂಡಲೇ ಪತ್ನಿಯನ್ನು ತಾಯಿ ಬಳಿ ಬಿಟ್ಟಿದ್ದ ಆನಂದ್‌, ಕಾರಾಗೃಹಕ್ಕೆ ಹಿಂದಿರುಗಿದ್ದ. ಆತ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದು, ಆರು ವರ್ಷ ಜೈಲು ಶಿಕ್ಷೆ ಪೂರೈಸಿದ್ದಾರೆ. ಇನ್ನೂ ಅಂದಾಜು ನಾಲ್ಕು ವರ್ಷ ಜೈಲು ಶಿಕ್ಷೆ ಪೂರೈಸಬೇಕಿದೆ.ಸಂತಾನಕ್ಕಾಗಿ ಪೆರೋಲ್‌ ಕೋರಿಕೆ

ಇದೀಗ ಮತ್ತೆ ಹೈಕೋರ್ಟ್‌ ಮೊರೆ ಹೋಗಿರುವ ಆನಂದ್‌ ಪತ್ನಿ, ಸದ್ಯ ತಾವು ಸಂತಾನ ಪಡೆಯಲು ಬಯಸಿದ್ದೇವೆ. ಆನಂದ್‌ ಜೈಲಿನಲ್ಲಿದ್ದಾರೆ ಸಂತಾನ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ 90 ದಿನ ಕಾಲ ಪತಿಯನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಲು 2024ರ ಏ.18ರಂದು ಜೈಲು ಅಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಮನವಿ ಪತ್ರ ಪರಿಗಣಿಸಿಲ್ಲ. ಮನವಿ ಪತ್ರ ಪರಿಗಣಿಸುವಂತೆ ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಆನಂದ್‌ ಪತ್ನಿ ಪರ ವಕೀಲ ಡಿ.ಮೋಹನ್‌ ಕುಮಾರ್‌ ವಾದ ಮಂಡಿಸಲಿದ್ದಾರೆ.

ವೈವಾಹಿಕ ಜೀವನದಿಂದ ಸಂತಾನ ಪಡೆಯುವುದು ನನ್ನ ಹಕ್ಕು. ಸಂತಾನ ಪಡೆದರೆ ಸಜಾಬಂಧಿ ತನ್ನ ನಡವಳಿಕೆ ತಿದ್ದುಕೊಳ್ಳಲು ನೆರವಾಗುತ್ತದೆ. ಶಿಕ್ಷಾವಧಿ ಪೂರೈಸಿ ಸಮಾಜದ ಮುಖ್ಯವಾಹಿಣಿಗೆ ವಾಪಸ್ಸಾದ ನಂತರ ಸಜಾಬಂಧಿಯು ಶಾಂತಿ-ನಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಪೆರೋಲ್‌ ಸೌಲಭ್ಯ ಕಲ್ಪಿಸಲಾಗಿದೆ. ಆನಂದ್‌ ಜೈಲಿನಲ್ಲಿ ಇರುವುದರಿಂದ ಸಂತಾನ ಪಡೆಯುವ ಹಕ್ಕಿನಿಂದ ನಾನು ವಂಚಿತಳಾಗುತ್ತಿದ್ದೇನೆ. ಸಜಾಬಂಧಿ ಮೂಲಭೂತ ಹಕ್ಕುಗಳನ್ನು ಸಹ ರಕ್ಷಣೆ ಮಾಡಬೇಕಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆದ್ದರಿಂದ ಆನಂದ್‌ ಅವರನ್ನು 90 ದಿನ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಆನಂದ್‌ ಪತ್ನಿ ಕೋರಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌