ಭವಾನಿ ರೇವಣ್ಣ ನಾಪತ್ತೆ: 3 ಜಿಲ್ಲೆಗಳಲ್ಲಿ ಎಸ್‌ಐಟಿ ಶೋಧ

KannadaprabhaNewsNetwork | Updated : Jun 03 2024, 09:55 AM IST

ಸಾರಾಂಶ

ಕೆ.ಆರ್‌.ನಗರದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾಗಿದ್ದ ಭವಾನಿ ರೇವಣ್ಣ ಅವರು ನಾಪತ್ತೆಯಾಗಿದ್ದು, ಎಸ್‌ಐಟಿ ತಂಡ ಹುಡುಕಾಟ ನಡೆಸುತ್ತಿದೆ.

 ಬೆಂಗಳೂರು : ಕೆ.ಆರ್‌.ನಗರದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾಗಿದ್ದ ಭವಾನಿ ರೇವಣ್ಣ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವು (ಎಸ್ಐಟಿ) ಮೂರು ಜಿಲ್ಲೆಗಳಲ್ಲಿ ಹುಡುಕಾಟ ನಡೆಸುತ್ತಿದೆ.

ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಎರಡು ಬಾರಿ ನೋಟಿಸ್‌ ನೀಡಿದೆ. ಆದರೂ ಭವಾನಿ ವಿಚಾರಣೆಗೆ ಗೈರಾಗಿದ್ದಾರೆ. ಈ ನಡುವೆ ನಿರೀಕ್ಷಣಾ ಜಾಮೀನು ಅರ್ಜಿಯು ನ್ಯಾಯಾಲಯದಲ್ಲಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಬಂಧನ ಭೀತಿಯಲ್ಲಿ ಭವಾನಿ ನಾಪತ್ತೆಯಾಗಿದ್ದಾರೆ.

ಇದರ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಹಾಸನ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿನ ಭವಾನಿ ನಿವಾಸಗಳು, ಸಂಬಂಧಿಕರು, ಸ್ನೇಹಿತರು, ಆಪ್ತರ ಮನೆಗಳಿಗೆ ತೆರಳಿ ತಲಾಶ್ ನಡೆಸುತ್ತಿದೆ. ಕಳೆದ ಎರಡು ದಿನಗಳಿಂದ ಈ ಮೂರು ಜಿಲ್ಲೆಗಳಲ್ಲಿ ಬೀಡು ಬಿಟ್ಟಿರುವ ಎಸ್‌ಐಟಿ ಅಧಿಕಾರಿಗಳು, ಭವಾನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಸಿಡಿಆರ್‌ ಪರಿಶೀಲನೆ:

ಮೊಬೈಲ್‌ ಸಂಪರ್ಕ ಸ್ಥಗಿತಗೊಳಿಸಿರುವ ಭವಾನಿ ಈವರೆಗೂ ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಎಸ್ಐಟಿ ಭವಾನಿ ತಮ್ಮ ಮೊಬೈಲ್‌ ಸ್ಥಗಿತಗೊಳಿಸುವ ಮುನ್ನ ಯಾರಿಗೆಲ್ಲಾ ಕರೆ ಮಾಡಿದ್ದರು ಎಂಬುದರ ಬಗ್ಗೆ ಪರಿಶೀಲಿಸುತ್ತಿದೆ. ಎಸ್‌ಐಟಿ ಟೆಕ್ನಿಕಲ್‌ ತಂಡವು ಟವರ್‌ ಡಂಪ್‌ ಲೊಕೇಶನ್‌, ಸಿಡಿಆರ್‌ ಪರಿಶೀಲಿಸಿ ಭವಾನಿ ಸುಳಿವು ಪತ್ತೆಹಚ್ಚಲು ಮುಂದಾಗಿದೆ.

ವಾರೆಂಟ್‌ ಜಾರಿ ಸಾಧ್ಯತೆ:

ಎರಡು ಬಾರಿ ನೋಟಿಸ್‌ ಜಾರಿಗೊಳಿಸಿದರೂ ಭವಾನಿ ವಿಚಾರಣೆಗೆ ಗೈರಾಗಿ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿ ಬಂಧನಕ್ಕೆ ವಾರೆಂಟ್‌ ಪಡೆದುಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಬಂಧನ ವಾರೆಂಟ್‌ ಜಾರಿಯಾದರೆ ಭವಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಸಾಧ್ಯತೆ

ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ಬಂಧನದ ಭೀತಿಯಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೀಗಾಗಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಷ್ಟರೊಳಗೆ ಎಸ್ಐಟಿ ಬಂಧಿಸಿದರೆ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ.

Share this article