ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಟ್ ಕಾಯಿನ್ ಹಗರಣ ಸಂಬಂಧ ಸಿಸಿಬಿ ಹಿಂದಿನ ಎಸಿಪಿ ಗೌತಮ್ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿದೆ. ನೋಟಿಸ್ ಹಿನ್ನಲೆಯಲ್ಲಿ ಸಿಐಡಿ ಕಚೇರಿಯಲ್ಲಿ ಎಸ್‌ಐಟಿ ಮುಂದೆ ಬುಧವಾರ ಹಾಜರಾಗಿದ್ದ ಗೌತಮ್ ಅವರನ್ನು ಸುದೀರ್ಘವಾಗಿ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಡ್ರಗ್ಸ್ ಪ್ರಕರಣ ಸಂಬಂಧ ಬಿಟ್ ಕಾಯಿನ್ ಹಗರಣದ ರೂವಾರಿ ಎನ್ನಲಾದ ಅಂತರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಆತನ ಸಹಚರರು ಬಂಧಿತರಾದ ವೇಳೆ ಸಿಸಿಬಿಯಲ್ಲಿ ಗೌತಮ್ ಎಸಿಪಿಯಾಗಿದ್ದರು. ಈಗ ಶ್ರೀಕಿ ವಿರುದ್ಧ ಪ್ರಕರಣದ ತನಿಖೆ ನಡೆಸಿದ್ದ ಹಳೇ ಸಿಸಿಬಿ ಅಧಿಕಾರಿಗಳು ಒಬ್ಬೊಬ್ಬರಾಗಿ ಎಸ್‌ಐಟಿ ವಿಚಾರಣೆಗೊಳಗಾಗುತ್ತಿದ್ದಾರೆ. ಅಂತೆಯೇ ಗೌತಮ್ ಅವರನ್ನು ಸಹ ಎಸ್‌ಐಟಿ ವಿಚಾರಣೆ ನಡೆಸಿದೆ ಎಂದು ಮೂಲಗಳು ಹೇಳಿವೆ.-----ಸಿಸಿಬಿ ಕಚೇರಿಯಲ್ಲಿ ಮಹಜರ್:ಇನ್ನು ಬಿಟ್ ಕಾಯಿನ್ ಹಗರಣದ ಸಾಕ್ಷ್ಯಾಧಾರ ನಾಶ ಹಾಗೂ ಪುರಾವೆ ತಿದ್ದಿದ ಆರೋಪ ಹಿನ್ನಲೆಯಲ್ಲಿ ಸಿಸಿಬಿ ಕಚೇರಿಯಲ್ಲಿ ಎಸ್‌ಐಟಿ ಮಹಜರ್ ಪ್ರಕ್ರಿಯೆ ನಡೆಸಿದೆ. ಈ ಪ್ರಕರಣದ ಸಾಕ್ಷ್ಯ ನಾಶವನ್ನು ಸಿಸಿಬಿ ಅಧಿಕಾರಿಗಳು ನಡೆಸಿದ್ದಾರೆ ಎಂಬ ಆರೋಪ ಬಂದಿದೆ. ಹೀಗಾಗಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಎಸ್‌ಐಟಿ ಮಹಜರ್ ನಡೆಸಿದೆ.