ಡಿಕೆಸು ಸೋಗಿನಲ್ಲಿ ನಟ ಧರ್ಮ ಸಂಭಾಷಣೆ? ಮೊಬೈಲ್‌ ಕಾನ್ಫರೆನ್ಸ್‌ ಕರೆಯ ಏಳು ನಿಮಿಷಗಳ ಆಡಿಯೋ ವೈರಲ್

KannadaprabhaNewsNetwork | Updated : Dec 27 2024, 07:18 AM IST

ಸಾರಾಂಶ

 ಡಿ.ಕೆ.ಸುರೇಶ್‌ ಸಹೋದರಿ ಎಂದು ಚಿನ್ನದಂಗಡಿ ಮಾಲೀಕರಿಗೆ ನಂಬಿಸಿ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ. ಚಿನ್ನಾಭರಣ ಸಾಲ ಪಡೆದು ವಂಚನೆ ಪ್ರಕರಣದ ಆರೋಪಿಗಳು ಚಿನ್ನದಂಗಡಿ ಮಾಲಕರಾದ ವನಿತಾ ಐತಾಳ್‌ ಜತೆಗೆ ನಡೆಸಿದ್ದಾರೆನ್ನಲಾದ ಮೊಬೈಲ್‌ ಕಾನ್ಫರೆನ್ಸ್‌ ಕರೆಯ ಏಳು ನಿಮಿಷಗಳ ಸಂಭಾಷಣೆಯ ಆಡಿಯೋ ವೈರಲ್ 

 ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್‌ ಸಹೋದರಿ ಎಂದು ಚಿನ್ನದಂಗಡಿ ಮಾಲೀಕರಿಗೆ ನಂಬಿಸಿ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ. ಚಿನ್ನಾಭರಣ ಸಾಲ ಪಡೆದು ವಂಚನೆ ಪ್ರಕರಣದ ಆರೋಪಿಗಳು ಚಿನ್ನದಂಗಡಿ ಮಾಲಕರಾದ ವನಿತಾ ಐತಾಳ್‌ ಜತೆಗೆ ನಡೆಸಿದ್ದಾರೆನ್ನಲಾದ ಮೊಬೈಲ್‌ ಕಾನ್ಫರೆನ್ಸ್‌ ಕರೆಯ ಏಳು ನಿಮಿಷಗಳ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.

ವಾರಾಹೀ ವಲ್ಡ್‌ ಆಫ್‌ ಗೋಲ್ಡ್‌ ಚಿನ್ನದಂಗಡಿ ಮಾಲೀಕರಾದ ವನಿತಾ ಎಸ್‌.ಐತಾಳ್‌ ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಬಂಗಾರಿ ಗೌಡ (ಹೆಸರು ಬದಲಿಸಲಾಗಿದೆ), ಈಕೆಯ ಪತಿ ಹರೀಶ್‌, ಚಿತ್ರನಟ ಧರ್ಮ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈ ನಡುವೆ ದೂರು ದಾಖಲಾಗುವ ಮುನ್ನ ಆರೋಪಿಗಳು ಚಿನ್ನದಂಗಡಿ ಮಾಲಕಿ ವನಿತಾ ಐತಾಳ್‌ ಜತೆಗೆ ನಡೆಸಿದ್ದಾರೆ ಎನ್ನಲಾದ ಕಾನ್ಫರೆನ್ಸ್‌ ಕರೆಯ ಸಂಭಾಷಣೆ ಇದೀಗ ಬಹಿರಂಗವಾಗಿದೆ. ನಟ ಧರ್ಮ ಅವರು ಮಾಜಿ ಸಂಸದ ಸುರೇಶ್‌ ಸೋಗಿನಲ್ಲಿ ಚಿನ್ನದಂಗಡಿ ಮಾಲಕಿ ವನಿತಾ ಐತಾಳ್‌ ಜತೆಗೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ.\

ಕಾನ್ಫರೆನ್ಸ್‌ ಕರೆಯ ಆಯ್ದ ಸಂಭಾಷಣೆ:

ಬಂಗಾರಿ ಗೌಡ- ಅಣ್ಣಾ ಲೈನ್‌ನಲ್ಲಿದ್ದಾರೆ ಮಾತಾಡ್ತೀಯಾ ನೀನು?ವನಿತಾ ಐತಾಳ್- ಹು.. ಹಾಕು ಮಾತಾಡ್ತೀನಿ.

ಬಂಗಾರಿ- ಅಣ್ಣಾ ವನಿತಾ ಲೈನ್‌ನಲ್ಲಿದ್ದಾಳೆ.ವನಿತಾ- ಅಣ್ಣಾ ನಮಸ್ತೆ... ಬ್ಯುಸಿ ಇದ್ರಾ?ಧರ್ಮ- ಹೇಳಿ ಹೇಳಿ.ವನಿತಾ- ಅಲ್ಲ ಅಣ್ಣಾ ನೀವ್ ಹೇಳಿದ್ರಿ ಅಂತ ಎಲ್ಲ ಸ್ಟಾರ್ಟ್ ಮಾಡಿದೆ. 2 ತಿಂಗಳಿಂದ ಎಲ್ಲ ಸ್ಟಕ್ ಆಗಿದೆ. ಐಶೂ ಮೊದ್ಲು ಎಲ್ಲಾ ಸರಿ‌ ಮಾಡ್ತಿದ್ಲು, ಈಗ ಅವಳೂ ಕಷ್ಟದಲ್ಲಿದ್ದಾಳೆ. ಈಗ ಒಂದು ರೊಟೇಶನ್ ಮಾಡಿಲ್ಲ ಅಂದ್ರೆ ತುಂಬಾ ಕಷ್ಟ ಆಗುತ್ತೆ ಅಣ್ಣಾ.ಧರ್ಮ- ಜನವರಿಯಿಂದ ಎಲೆಕ್ಷನ್ ವರೆಗೂ ನನಗೂ ಕಷ್ಟ ಆಗಿದೆ. ನನ್ನಿಂದ ನಿಮ್ಗೂ ಸಮಸ್ಯೆ ಆಗಿದೆ. ಏನೇ ಲಾಸ್ ಆಗಿದ್ರು ನಾನು ಕವರ್ ಮಾಡಿ‌ಕೊಡ್ತೀನಿ. ಇನ್ನೂ ಜಾಸ್ತಿ ನಾನೇ ಕೊಡ್ತೀನಿ.

ವನಿತಾ- ಅಲ್ಲ ಅಣ್ಣಾ 6 ರಿಂದ 7 ಕೆ.ಜಿ ಟ್ರಾನ್ಸಕ್ಷನ್ ಮಾಡ್ಬೇಕು. ಡೀಲರ್ಸ್ ಎಲ್ಲ ನಮ್ಮ ಶೋ ರೂಂ ಅಲ್ಲಿ‌ ಬಂದು ಕೂತ್ಕೊಂಡಿದ್ದಾರೆ. ನನಗೂ ಕೈ ನಡೆಸೋಕ್ ಆಗ್ತಿಲ್ಲ.ಧರ್ಮ- ನನ್ನಿಂದಾನೆ ಅವಳಿಗೂ, ನಿಮ್ಗೂ ಟೈಟ್ ಆಗಿರೋದು. ಆದಷ್ಟು ನಾನ್ ಮಾಡ್ತೀನಿ. ಅದೇನೇ ಲಾಸ್ ಇದ್ರೂ ನಾನ್ ಮಾಡ್ಕೊಡ್ತೀನಿ. ಎಲೆಕ್ಷನ್‌ ಮುಗಿಯುವವರೆಗೂ ಫ್ರೀ ಬಿಡಿ. ಎಲೆಕ್ಷನ್‌ ಮುಗಿದ ಮೇಲೆ ಏನೇ ಲಾಸ್‌ ಇದ್ದರೂ ಎಲ್ಲಾ ಸರಿ ಮಾಡ್ತೀನಿ.

ಬಂಗಾರಿ- ಅಣ್ಣ ನೀನು ಅವಳಿಗೆ ಮೇ ಎಂಡ್‌ಗೆ ಕ್ಲಿಯರ್ ಮಾಡು. ಮೇ ಎಂಡ್‌ ಆದ್ಮೇಲೆ ಬಿಜಿನೆಸ್ ಮಾಡೋದು ಬೇಡ. ಅಲ್ಲಿಗೆ ಏನಿದೆಯೋ ಕ್ಲಿಯರ್‌ ಮಾಡು. ಈಗ ಅವಳು ಟರ್ನ್‌ ಮಾಡ್ಕೋಳೋಕೆ ಹಣ ಕೊಡಿ ಅಂತಾ ಕೇಳ್ತಿದ್ದಾಳೆ.ವನಿತಾ- ಅಟ್‌ ಲೀಸ್ಟ್‌ ಮೇ ಎಲೆಕ್ಷನ್‌ ಆಗುವರೆಗೂ ಬೇಡಾ ಅಂತಾ ನೀವು ಹೇಳುತ್ತಿದ್ದೀರಿ. ಆದರೆ, ಈಗ ನೀವು ಟರ್ನ್‌ ಮಾಡೋಕೆ ಕೊಟ್ಟರೆ, ನಾನು ಡೀಲರ್ಸ್‌ನ ಸಂಬಾಳಿಸ್ತೇನೆ. 15 ದಿನಕ್ಕೆ 50-60 ಲಕ್ಷ ರು. ರೆಡಿ ಮಾಡಿಸಿ ಕೊಡ್ತಿದ್ರೇ ನಾನು ಟರ್ನ್‌ ಮಾಡಿರ್ತಿನಿ. ನಿಮ್‌ ಎಲೆಕ್ಷನ್‌ ಮುಗಿದ ಮೇಲೆ ಏನಿದೆ ನಿಮ್ಮದು ಅದುನ್ನಾ ಕ್ಲೋಸ್‌ ಮಾಡಿ ಮತ್ತೆ ರಿಶಫಲ್‌ ಮಾಡಬೇಕಾ ಅಥವಾ ಫ್ರೆಶಾಗಿ ಸ್ಟಾರ್ಟ್‌ ಮಾಡೋಣ. ಈಗ ತುಂಬಾ ಕುತ್ಗೆಗಿದೆ ಅಣ್ಣಾ.

ಬಂಗಾರಿ- ಅಣ್ಣ ನೀನು 50 ಲಕ್ಷ 15 ದಿನಕ್ಕೊಂದ್ ಸರಿ ಕೊಡು. ಅವಳು ರೊಟೇಷನ್ ಮಾಡ್ಕೋತಾಳೆ. ಅವಳೇ ಹೊರಗಡೆಯಿಂದ 2-3 ಕೋಟಿ ದುಡ್ಡು ತಂದು ಟರ್ನ್‌ ಮಾಡ್ತಿರ್ತಾಳೆ.ಧರ್ಮ- ಮಾರ್ಚ್ ಎಂಡ್‌ವರೆಗೂ ಕಾಯಿರಿ.ವನಿತಾ- ಐಶೂ ಇರೋ ಪರಿಸ್ಥಿತಿಯಲ್ಲಿ ನಾನು ಅವಳನ್ನ ಕೇಳೋಕೆ ಆಗಲ್ಲ. ಇದು ಸರಿ ಮಾಡಿದರೆ, ನನ್‌ ಹತ್ರ ಇರುವ ಡೀಲರ್ಸ್‌ಗಳು 10 ಅಲ್ಲ 50 ಕೆ.ಜಿ. ಕೊಡ್ತಾರೆ. ಡೀಲರ್ಸ್ ಭಯ ಪಟ್ಟಿದ್ದಾರೆ. ಅವರಿಗೆ 50 ಲಕ್ಷ ಕೊಡ್ತಿದ್ರೇ ಎಲೆಕ್ಷನ್ ಟೈಮ್ಗೆ 15 ಕೆಜಿ ಗೋಲ್ಡ್ ಕೊಡ್ತಾರೆ. ಇವಾಗ ಒಂದ್ಸಾರಿ ಡೀಲರ್ಸ್‌ಗೆ ಭಯ ಹೋಗ್‌ ಬೇಕು ಅಣ್ಣಾ.

Share this article