ಬೆಂಗಳೂರು : ಚಿನ್ನಾಭರಣ ವ್ಯವಹಾರದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಈಗ ವಂಚನೆ ಕೃತ್ಯದಲ್ಲಿ ತನ್ನೊಂದಿಗೆ ಬಂಧಿತನಾಗಿರುವ ಪರಿಚಿತ ಚಿನ್ನದ ವ್ಯಾಪಾರಿ ವಿರುದ್ಧ 2 ತಿಂಗಳ ಹಿಂದೆಯೇ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಶ್ವೇತಾಗೌಡ ದೂರು ದಾಖಲಿಸಿದ್ದ ಸಂಗತಿ ಬೆಳಕಿಗೆ ಬಂದಿದೆ.
ಮತ್ತೊಂದೆಡೆ, ನಟ ದರ್ಶನ್ ಪ್ರೇಯಸಿ ಪವಿತ್ರಾಗೌಡ ಹಾಗೂ ಅವರ ಸ್ನೇಹಿತ ಪಟ್ಟಣಗೆರೆ ವಿನಯ್ ಜತೆ ಕೂಡ ಶ್ವೇತಾಗೌಡ ಸ್ನೇಹವಿತ್ತು. ಇದೇ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಪವಿತ್ರಾಗೌಡಳನ್ನು ಶ್ವೇತಾ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಳು ಎನ್ನಲಾಗಿದೆ.
ಚೆನ್ನಾರಾಮ್ ಬಂಧನ:
ಚಿನ್ನಾಭರಣ ವ್ಯಾಪಾರಿಗಳಿಗೆ ವಂಚಿಸಿ ಶ್ವೇತಾ ಸಂಪಾದಿಸಿದ ಆಭರಣ ಸ್ವೀಕರಿಸುತ್ತಿದ್ದ ಆರೋಪದಡಿ ಚೆನ್ನಾರಾಮ್‌ನನ್ನು ಬಂಧಿಸಿ ಪುಲಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ನೇತೃತ್ವದ ತಂಡವು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದೆ. ತನ್ನ ವಿರುದ್ಧವೇ ಶ್ವೇತಾಗೌಡ ದೂರು ಕೊಟ್ಟಿದ್ದಳು. ನಾನು ತಪ್ಪು ಮಾಡಿಲ್ಲವೆಂದು ಚೆನ್ನಾರಾಮ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ದೂರು ಇತ್ಯರ್ಥಗೊಳಿಸಿದ್ದ ಪೊಲೀಸರು:
ಹಲವು ವರ್ಷಗಳಿಂದ ತನ್ನ ಮನೆ ಸಮೀಪ ಚಿನ್ನಾಭರಣ ಅಂಗಡಿ ಇಟ್ಟಿರುವ ರಾಜಸ್ಥಾನ ಮೂಲದ ಮೋಹನ್ ಲಾಲ್, ಚೆನ್ನಾರಾಮ್ ಹಾಗೂ ಬೈರಾ ರಾಮ್ ಸೋದರರಿಗೆ ಶ್ವೇತಾಗೌಡ ಕುಟುಂಬ ಪರಿಚಯವಿತ್ತು. ಮೊದಲಿನಿಂದಲೂ ಇದೇ ಅಂಗಡಿಯಲ್ಲಿ ಚಿನ್ನ ಖರೀದಿಯನ್ನು ಶ್ವೇತಾ ತಾಯಿ ಸಹ ಮಾಡುತ್ತಿದ್ದರು. ಹೀಗಾಗಿ ಈ ಮೂವರು ವ್ಯಾಪಾರಿಗಳಿಗೆ ಶ್ವೇತಾ ಪರಿಚಯವಿದ್ದಳು. ಇದೇ ಸ್ನೇಹದಲ್ಲೇ ಶ್ವೇತಾಳ ಚಿನ್ನದ ಬ್ಯುಸಿನೆಸ್‌ಗೆ ಅವರು ಸಾಥ್ ಕೊಟ್ಟಿದ್ದರು ಎಂದು ತಿಳಿದು ಬಂದಿದೆ.
ಚಿನ್ನದ ಬ್ಯುಸಿನೆಸ್ ಹೆಸರಿನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಟೋಪಿ ಹಾಕಿ ಸಂಪಾದಿಸಿದ್ದ ಒಡವೆಯನ್ನು ಬಾಗಲಗುಂಟೆಯ ಈ ಸೋದರರ ಅಂಗಡಿಯಲ್ಲೇ ಆಕೆ ವಿಲೇವಾರಿ ಮಾಡುತ್ತಿದ್ದಳು. ಬಳಿಕ ಆ ಆಭರಣಗಳನ್ನು ಕರಗಿಸಿ ಬೇರೆ ವಿನ್ಯಾಸದ ಒಡವೆ ತಯಾರಿಸಿ ಜನರಿಗೆ ಮೋಹನ್ ಲಾಲ್, ಚೆನ್ನಾರಾಮ್ ಹಾಗೂ ಬೈರಾರಾಮ್ ಮಾರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
2ತಿಂಗಳ ಹಿಂದೆ ಚಿನ್ನಾಭರಣ ವ್ಯವಹಾರದಲ್ಲಿ ಚೆನ್ನಾರಾಮ್ ಹಾಗೂ ಶ್ವೇತಾ ಮಧ್ಯೆ ಮನಸ್ತಾಪವಾಗಿತ್ತು. ಆಗ ತಾನು ಅಡಮಾನವಿಟ್ಟ ಸುಮಾರು 400 ಗ್ರಾಂ ಆಭರಣವನ್ನು ಚೆನ್ನಾರಾಮ್ ಮರಳಿ ಕೊಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿ ವಿಜಯನಗರ ಠಾಣೆಗೆ ಶ್ವೇತಾ ದೂರು ನೀಡಿದ್ದಳು. ಈ ದೂರನ್ನು ಮನವಿ ಎಂದು ಪೊಲೀಸರು ಪರಿಗಣಿಸಿದರು. ಹಾಗಾಗಿ ಎಫ್‌ಐಆರ್ ದಾಖಲಾಗಲಿಲ್ಲ. ಈ ದೂರಿನ ಮೇರೆಗೆ ಚೆನ್ನಾರಾಮ್‌ನನ್ನು ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿದರು. ಕೊನೆಗೆ ಇಬ್ಬರ ಸಮ್ಮತಿ ಮೇರೆಗೆ ದೂರನ್ನು ಪೊಲೀಸರು ಇತ್ಯರ್ಥಗೊಳಿಸಿದ್ದರು.
ಚೆನ್ನಾರಾಮ್ ಬಂಧನ, ಇಬ್ಬರಿಗೆ ನೋಟಿಸ್:
ವಂಚನೆ ಪ್ರಕರಣದಲ್ಲಿ ಶ್ವೇತಾಗೌಡ ಬಂಧನವಾದ ಬಳಿಕ ಬಾಗಲಗುಂಟೆಯ ಚಿನ್ನಾಭರಣದ ವ್ಯಾಪಾರಿಗಳಿಗೆ ಪೊಲೀಸ್ ತನಿಖೆಯ ಉರುಳು ಸುತ್ತಿಕೊಂಡಿದೆ. ವಂಚನೆ ಕೃತ್ಯದಲ್ಲಿ ಸಂಪಾದಿಸಿದ್ದ ಒಡವೆಯನ್ನು ಸ್ವೀಕರಿಸಿದ ಆರೋಪದ ಮೇರೆಗೆ ಚೆನ್ನಾರಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಮೋಹನ್ ಲಾಲ್ ಹಾಗೂ ಬೈರಾ ರಾಮ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪುಲಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ನೋಟಿಸ್ ನೀಡಿದ್ದಾರೆ. ಈ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಮೋಹನ್ ಲಾಲ್, ಕೆಲಸದ ನಿಮಿತ್ತ ರಾಜಸ್ಥಾನಕ್ಕೆ ಬಂದಿದ್ದೇನೆ. ನಗರಕ್ಕೆ ಮರಳಿದ ಕೂಡಲೇ ವಿಚಾರಣೆಗೆ ಬರುವುದಾಗಿ ಹೇಳಿದ್ದಾರೆ. ಆದರೆ ಬೈರಾರಾಮ್ ಮಾತ್ರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.