ಬೆಂಗಳೂರು : ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಗಲಿಲ್ಲ. ಕಾಂಗ್ರೆಸ್‌ ಸರ್ಕಾರ ಹಗರಣರಹಿತವಾಗಿ ಖಾಲಿ ಹುದ್ದೆ ತುಂಬಲಿದ್ದು, ಸದ್ಯದಲ್ಲೇ ಈ ಬಗ್ಗೆ ಕ್ಯಾಬಿನೆಟ್‌ನಲ್ಲೂ ಚರ್ಚಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಯುವಕರ ಪ್ರತಿಭಟನೆ

ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಯುವಕರ ಪ್ರತಿಭಟನೆ ಕುರಿತು ಬುಧವಾರ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಗಲಿಲ್ಲ. ಅವರ ಸಮಯದಲ್ಲಿ ಸಾಕಷ್ಟು ಹಗರಣಗಳಾದವು. ಉದ್ಯೋಗಾಕಾಂಕ್ಷಿ ಯುವಕರ ನೋವು ಅರ್ಥವಾಗುತ್ತದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಹುದ್ದೆಗಳ ಭರ್ತಿ ಕುರಿತು ಯೋಜನೆ ತಯಾರಿಸಿದ್ದೇವೆ

ಹುದ್ದೆಗಳ ಭರ್ತಿ ಕುರಿತು ಯೋಜನೆ ತಯಾರಿಸಿದ್ದೇವೆ. ಕೆಪಿಎಸ್‌ಸಿ ಸೇರಿದಂತೆ ಬೇರೆ ಸಂಸ್ಥೆಗಳಿಗೆ ಹುದ್ದೆ ಭರ್ತಿಗೆ ಜವಾಬ್ದಾರಿ ನೀಡಿದ್ದೇವೆ. ಶಿಕ್ಷಕರ ಹುದ್ದೆ, ಆರೋಗ್ಯ ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಒಳಮೀಸಲಾತಿ ವಿಚಾರಕ್ಕೆ ಒಂದಷ್ಟು ಅಡಚಣೆಗಳು ಬರುತ್ತಿದೆ. ನಿರುದ್ಯೋಗಿ ಯುವಕರಿಗೆ ಶಕ್ತಿ ನೀಡಲು ಯುವನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.


ರಾಜ್ಯದ ಯುವಕರು ಧೈರ್ಯವಾಗಿರಿ. ನಾವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಶೀಘ್ರ ನಿಮಗೆ ಸಂದೇಶ ನೀಡುತ್ತೇವೆ. ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ, ಮಾಡುತ್ತೇವೆ, ಇದಕ್ಕೆ ಬದ್ಧವಾಗಿದ್ದೇವೆ ಎಂದರು.

ವಿವಿಧ ಇಲಾಖೆಗಳಲ್ಲಿ ಬಿಲ್‌ ಬಾಕಿ ಬಗ್ಗೆ ಕೇಳಿದಾಗ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ವೇಳೆ ಯಾವುದೇ ಆರ್ಥಿಕ ಸ್ಥಿತಿಗತಿ ನೋಡದೆ ಹೆಚ್ಚಿನ ಕಾಮಗಾರಿಗಳಿಗೆ ಅನುಮತಿ ನೀಡಲಾಯಿತು. ಈ ಕಾರಣಕ್ಕೆ ಈಗ ಸಮಸ್ಯೆ ಉಂಟಾಗಿದೆ. ನಾವು ಅನೇಕ ಗುತ್ತಿಗೆದಾರರಿಗೆ ಹಣ ಲಭ್ಯತೆ ಇಲ್ಲದೆ ಕಾಮಗಾರಿ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರೂ, ಒಂದಷ್ಟು ಜನ ಕಾಮಗಾರಿ ಕೈಗೊಂಡಿದ್ದಕ್ಕೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ ಪ್ರಸ್ತಾಪ ಸಂಬಂಧ ಅವರ ಜೊತೆ ಚರ್ಚಿಸುವುದಾಗಿ ಹೇಳಿದರು.