ಮಾ.7 ರಂದು ವಿಜಯಪುರ ಕೇಂದ್ರವಾಗಿರಿಸಿಕೊಂಡು ರಾಜ್ಯಾದ್ಯಂತ ಪ್ರತಿಭಟನೆ: ಶರಣಯ್ಯ ಭಂಡಾರಿಮಠ ಎಚ್ಚರಿಕೆ

ಕನ್ನಡಪ್ರಭ ವಾರ್ತಿ ಸಿಂದಗಿ

ಸರ್ಕಾರ ಉದ್ಯೋಗ ಆಕಾಂಕ್ಷಿಗಳ ತಾಳ್ಮೆ ಪರೀಕ್ಷಿಸುತ್ತಿದೆ. ಸರ್ಕಾರಿ ನೌಕರಿಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಗಲಿರುಳು ಶ್ರಮಪಡುತ್ತಿದ್ದಾರೆ. ಸರ್ಕಾರ ಅವರ ಬದುಕಿಗೆ ಬೆಳಕಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರ ಕಣ್ಣಿದ್ದರೂ ಕುರುಡರಂತೆ ಮಾಡುತ್ತಿರುವುದು ಯಾವ ನ್ಯಾಯ ಎಂದು ವಿಜಯಪುರದ ಎಸ್.ಬಿ.ಕರಿಯರ್ ಅಕಾಡೆಮಿಯ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಈಗಾಗಲೇ ರಾಜ್ಯಾದ್ಯಂತ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದು ಕಳೆದ 6 ವರ್ಷಗಳಿಂದ ಯಾವುದೇ ಅಧಿಸೂಚನೆ ಇಲ್ಲದೆ 43 ಇಲಾಖೆಗಳಲ್ಲಿ ಸುಮಾರು 2,87,000 ಹುದ್ದೆಗಳು ಖಾಲಿ ಇವೆ. ಕೂಡಲೇ ಅವುಗಳನ್ನು ರಾಜ್ಯ ಸರ್ಕಾರ ಭರ್ತಿ ಮಾಡಿಕೊಳ್ಳಬೇಕು. ಲಕ್ಷಾಂತರ ಉದ್ಯೋಗಿಗಳು ಉದ್ಯೋಗ ನೇಮಕಾತಿಗೆ ಪ್ರಕ್ರಿಯೆ ಎದುರು ನೋಡುತ್ತಿದ್ದಾರೆ. ಆದರೆ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಹೆಜ್ಜೆಯನ್ನೂ ಇರಿಸುತ್ತಿಲ್ಲ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಉದ್ಯೋಗ ಭರ್ತಿಗಾಗಿ ಸಾವಿರಾರು ವಿದ್ಯಾರ್ಥಿಗಳು ಬೀದಿಗೀಳಿದು ಹೋರಾಟ ನಡೆಸಿದ್ದಾರೆ. ಎಲ್ಲ ಜಿಲ್ಲಾ ಕೇಂದ್ರದಲ್ಲಿಯೂ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಈ ನ್ಯಾಯಯುತವಾದ ಬೇಡಿಕೆ ಈಡೇರಿಸಬೇಕಾದ ಸರ್ಕಾರಗಳು ಈ ವಿಷಯದಲ್ಲಿ ಗಂಭೀರವಾದ ಹೆಜ್ಜೆಯನ್ನೇ ಇರಿಸುತ್ತಿಲ್ಲ ಎಂಬುವುದು ಅತ್ಯಂತ ನೋವಿನ ಸಂಗತಿ. ಉದ್ಯೋಗ ಒದಗಿಸುವುದಾಗಿ ನೀಡಿದ ಭರವಸೆಯನ್ನು ಏಕೆ ಈಡೇರಿಸುತ್ತಿಲ್ಲ. ಇದು ಲಕ್ಷಾಂತರ ಉದ್ಯೋಗಕಾಂಕ್ಷಿಗಳಿಗೆ ತೊಂದರೆಯನ್ನುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.

--------------

ರಾಜ್ಯದಲ್ಲಿ ೨.೭೩ ಲಕ್ಷ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಶಿಕ್ಷಣ ಇಲಾಖೆಯಲ್ಲಿ ೬೯,೮೦೦, ಆರೋಗ್ಯ ಇಲಾಖೆಯಲ್ಲಿ ೩೪,೯೦೮, ಗೃಹ ಇಲಾಖೆಯಲ್ಲಿ ೨೩,೫೮೦ ಹೀಗೆ ನಾನಾ ಇಲಾಖೆಯಲ್ಲಿ ಉದ್ಯೋಗ ಖಾಲಿ ಇವೆ. ಅತ್ತ ಖಾಲಿ ಹುದ್ದೆಗಳಿಂದಾಗಿ ಆಡಳಿತ ಯಂತ್ರವೂ ಸೂಸೂತ್ರವಾಗಿ ನಡೆಯುತ್ತಿಲ್ಲ. ಜನಸಾಮಾನ್ಯರಿಗೂ ತಮ್ಮ ಕೆಲಸ ಕಾರ್ಯಗಳಿಗೆ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವ್ಯರ್ಥವಾಗಿ ಕಾಲಹರಣ ಮಾಡದೇ ಆದ್ಯತೆ ಮೇರೆಗೆ ಉದ್ಯೋಗ ಭರ್ತಿಗೆ ಆದ್ಯತೆ ನೀಡುವಬೇಕು. ಇಲ್ಲಾವಾದರೇ ಮಾ.7 ರಂದು ವಿಜಯಪುರ ಕೇಂದ್ರವಾಗಿರಿಸಿಕೊಂಡು ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ.

-ಶರಣಯ್ಯ ಭಂಡಾರಿಮಠ, ವಿಜಯಪುರದ ಎಸ್.ಬಿ.ಕರಿಯರ್ ಅಕಾಡೆಮಿಯ ಸಂಸ್ಥಾಪಕರು.