ದಾಸರಹಳ್ಳಿ : ನಟಿ ದೀಪಿಕಾ ದಾಸ್ ಪತಿಯ ಬಗ್ಗೆ ಯುವಕನೊಬ್ಬ ಅಪಪ್ರಚಾರ ಮಾಡುತ್ತಿದ್ದು, ಬೆದರಿಕೆ ಹಾಕಿದ್ದಾನೆ ಎಂದು ಆಕೆಯ ತಾಯಿ ಪದ್ಮಲತಾ ಅವರು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಟಿ ದೀಪಿಕಾ ದಾಸ್ ಇತ್ತೀಚೆಗಷ್ಟೆ ದೀಪಕ್ ಕುಮಾರ್ ಎಂಬುವರೊಟ್ಟಿಗೆ ವಿವಾಹವಾಗಿದ್ದಾರೆ. ಪದ್ಮಲತಾಗೆ ಕರೆ ಮಾಡಿರುವ ಯಶವಂತ್ ಹೆಸರಿನ ಯುವಕ, ತನ್ನ ಅಳಿಯ ದೀಪಕ್ ಕುಮಾರ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ. ಅಲ್ಲದೆ ಹಣ ಕೊಡದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ದೀಪಿಕಾ ದಾಸ್ಗೆ ಏಕೆ ಆತನೊಂದಿಗೆ ಮದುವೆ ಮಾಡಿದ್ರಿ, ಆತ ಒಬ್ಬ ಮೋಸಗಾರ. ದೀಪಕ್ ಕುಮಾರ್ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಹಲವು ಪ್ರಕರಣ ಆತನ ಮೇಲಿದ್ದು ಜೈಲಿಗೆ ಹೋಗಿ ಬಂದಿದ್ದಾನೆ’ ಎಂದು ಯಶವಂತ್ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೀಪಿಕಾ ದಾಸ್ಗೂ ಕರೆ ಮಾಡಿರುವ ಯಶವಂತ್, ನನಗೆ ಹಣ ಕೊಡಿ, ಇಲ್ಲ ಅಂದ್ರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ದೀಪಕ್ ಕುಮಾರ್ ಇಂದಾಗಿ ನನಗೆ ನಷ್ಟವಾಗಿದ್ದು, ಸಾಲಗಾರರ ಕಾಟ ಹೆಚ್ಚಾಗಿದೆ, ನೀವು ನನಗೆ ಹಣ ಕೊಡದೇ ಇದ್ದರೆ ನಿಮ್ಮ ಹೆಸರುಗಳು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಯಶವಂತ್ ಬೆದರಿಕೆ ಹಾಕಿದ್ದಾನೆ. ದೀಪಕ್ ಕುಮಾರ್ ಅವರ ಕೆಲವು ಗೆಳೆಯರಿಗೂ ಸಹ ಯಶವಂತ್ ಕರೆ ಮಾಡಿದ್ದಾನೆ. ಕಳೆದ 7 ತಿಂಗಳಿಂದಲೂ ಯಶವಂತ್ ದೀಪಿಕಾ ದಾಸ್, ಪದ್ಮಲತಾ ಹಾಗೂ ದೀಪಕ್ ಕುಮಾರ್‌ಗೆ ಸಂಬಂಧಿಸಿದ ಇನ್ನಿತರರಿಗೆ ಕರೆ ಮಾಡುತ್ತಲೇ ಇದ್ದಾನೆ ಎಂದು ಪದ್ಮಲತಾ ದೂರಿನಲ್ಲಿ ಹೇಳಿದ್ದಾರೆ.ಮಾದನಾಯಕನಹಳ್ಳಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೀಪಿಕಾ ದಾಸ್ ಹಾಗೂ ದೀಪಕ್ ಕುಮಾರ್ ಕೆಲ ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದಾರೆ. ಇಬ್ಬರೂ ಸಹ ಪ್ರವಾಸಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ದೀಪಿಕಾ ದಾಸ್, ‘ನಾಗಿಣಿ’ ಸೇರಿದಂತೆ ಕನ್ನಡದ ಹಲವಾರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಬಿಗ್ಬಾಸ್ನಲ್ಲಿಯೂ ಸಹ ದೀಪಿಕಾ ದಾಸ್ ಭಾಗವಹಿಸಿದ್ದರು.