;Resize=(412,232))
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಚಲನಚಿತ್ರ ನಟ ದರ್ಶನ್ ಹಾಗೂ ಅವರ ಸಹಚರರ ಪಾಲಿಗೆ ಎಡಿಜಿಪಿ ಬಿ.ದಯಾನಂದ್ ಅವರು ದುಃಸ್ವಪ್ನದಂತೆ ಪರಿಣಿಮಿಸಿದ್ದಾರೆ.
ಕಳೆದ 2024ರ ಜೂನ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಾಗ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರ ದಿಟ್ಟ ನಿಲುವಿನಿಂದಾಗಿ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ ಇತರರ ಬಂಧನವಾಗಿತ್ತು. ಈಗ ಜಾಮೀನು ರದ್ದುಗೊಂಡು ಮತ್ತೆ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದ ಹೊತ್ತಿನಲ್ಲೇ ದಯಾನಂದ್ ಅವರು ಬಂದೀಖಾನೆ ಇಲಾಖೆಯ ಮುಖ್ಯಸ್ಥರಾಗಿದ್ದಾರೆ.
ಕಳೆದ ಬಾರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿ ದರ್ಶನ್ ಅವರಿಗೆ ವಿಶೇಷ ಸೌಲಭ್ಯ ಪಡೆದ ವಿವಾದ ಭಾರಿ ಸದ್ದು ಮಾಡಿತ್ತು. ಅಲ್ಲದೆ ದರ್ಶನ್ ಆತಿಥ್ಯಕ್ಕೆ ಕೆಲ ರೌಡಿಗಳು ಟೊಂಕ ಕಟ್ಟಿದ್ದರು. ಈಗ ದಯಾನಂದ್ ಅವರೇ ಕಾರಾಗೃಹ ಇಲಾಖೆಯ ಮುಖ್ಯಸ್ಥರಾಗಿರುವ ಕಾರಣ ದರ್ಶನ್ ಅವರಿಗೆ ‘ವಿಶೇಷ’ ಭಾಗ್ಯಗಳು ಸಿಗುವುದು ದುಸ್ತರವಾಗಬಹುದು ಎನ್ನಲಾಗಿದೆ. ಇನ್ನು ದರ್ಶನ್ ಜಾಮೀನು ರದ್ದು ವಿಚಾರ ತಿಳಿದ ಕೂಡಲೇ ಕಾರಾಗೃಹ ಅಧಿಕಾರಿಗಳಿಗೆ ಸೂಕ್ತ ಬಂದೋಬಸ್ತ್‌ಗೆ ಎಡಿಜಿಪಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.