ಮಂಡ್ಯ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದ ಪತಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಯಲಿಯೂರು ವೃತ್ತದ ಬಳಿ ವಾಸವಾಗಿದ್ದ ರಾಮಚಂದ್ರ ಶಿಕ್ಷೆಗೊಳಗಾದ ಆರೋಪಿ. ಈತನ ಪತ್ನಿ ಮನುಜಳಿಗೆ ಚಾಕುವಿನಿಂದ ಇರಿದು, ಕತ್ತು ಕೊಯ್ದು ಹತ್ಯೆ ಮಾಡಿದ್ದನು.
ರಾಮಚಂದ್ರ ಯಲಿಯೂರು ಸರ್ಕಲ್‌ನಲ್ಲಿರುವ ತನ್ನ ಮನೆಯ ಬಳಿ ಕೋಳಿ ಫಾರಂ ಇಟ್ಟುಕೊಂಡು ಪತ್ನಿ ಮನುಜ ಹಾಗೂ ಮಗನೊಂದಿಗೆ ವಾಸವಾಗಿದ್ದನು. ಈತನ ಪತ್ನಿ ಮನುಜ ಬೇರೊಬ್ಬನನ್ನು ಪ್ರೀತಿಸಿ ಆತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ವಿಚಾರ ತಿಳಿದ ಪತಿ ರಾಮಚಂದ್ರ ಪತ್ನಿಗೆ ಹಲವು ಬಾರಿ ತಿಳಿವಳಿಕೆ ಹೇಳಿದ್ದನು. ಆದರೂ ಆಕೆ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು.
ಇದರಿಂದ ಕೋಪಗೊಂಡ ರಾಮಚಂದ್ರ ೨೦೨೩ರ ಮೇ ೪ರಂದು ಆಕೆಯೊಂದಿಗೆ ಜಗಳ ತೆಗೆದು ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಲು ಯತ್ನಿಸಿದ್ದ. ಅದರಿಂದ ತಪ್ಪಿಸಿಕೊಂಡು ಕಿರುಚುತ್ತಾ ಆಕೆ ರಸ್ತೆಯಲ್ಲಿ ಓಡಲು ಆರಂಭಿಸಿದ್ದಳು. ರಸ್ತೆಯಲ್ಲಿ ಹೋಗುತ್ತಿದ್ದವರು ಆಕೆಯನ್ನು ಸಮಾಧಾನಪಡಿಸಿ ಗಂಡ ರಾಮಚಂದ್ರನೊಂದಿಗೆ ಮನೆಗೆ ಕಳುಹಿಸಿದ್ದರು. ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ತನ್ನ ಸೊಂಟದಲ್ಲಿ ಇಟ್ಟುಕೊಂಡಿದ್ದ ಚಾಕುವಿನಿಂದ ಆಕೆಯ ಎದೆ, ಕೈಗೆ ಇರಿದಿದ್ದ. ಬಳಿಕ ಆಕೆಯ ಕುತ್ತಿಗೆ ಕೊಯ್ದು ಧಾರುಣವಾಗಿ ಹತ್ಯೆಗೈದಿದ್ದನು.
ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ಸ್‌ಪೆಕ್ಟರ್ ಎನ್.ಆರ್.ಸಿದ್ದಪ್ಪ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಯ್ಯುದುನಿಶಾ ಅವರು ವಿಚಾರಣೆ ನಡೆಸಿ ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು ೫೨ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಎನ್.ಬಿ.ವಿಜಯಲಕ್ಷ್ಮ್ಮೀ ಅವರು ವಾದ ಮಂಡಿಸಿದ್ದರು.