1 ತಿಂಗಳ ಬಳಿಕ ಭವಾನಿ ಪ್ರತ್ಯಕ್ಷ

Published : Jun 08, 2024, 11:27 AM IST
bhavani revanna

ಸಾರಾಂಶ

ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ವಿಚಾರಣೆಗೆ ಸೋಮವಾರ ಹಾಜರಾದರು.

ಬೆಂಗಳೂರು :  ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ದೊರಕಿದ ಬೆನ್ನಲ್ಲೇ ತಮ್ಮ ಪುತ್ರ, ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಮೇಲಿನ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಸುಮಾರು ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ವಿಚಾರಣೆಗೆ ಸೋಮವಾರ ಹಾಜರಾದರು.

ಅಪಹರಣ ಪ್ರಕರಣದಲ್ಲಿ ಬಂಧನ ವಾರಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬಂಧನ ಭೀತಿಗೊಳಗಾಗಿದ್ದ ಭವಾನಿ ಅವರಿಗೆ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಬಳಿಕ ನ್ಯಾಯಾಲಯದ ಆದೇಶದಂತೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಿಐಡಿ ಕಚೇರಿಯಲ್ಲಿರುವ ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ಭವಾನಿ ರೇವಣ್ಣ ಹಾಜರಾದರು.

ಬಳಿಕ ಸಂಜೆ 5 ಗಂಟೆವರೆಗೆ ಅವರನ್ನು ವಿಚಾರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು, ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದಾರೆ.

ತಾವು ಯಾರನ್ನೂ ಅಪಹರಿಸಿಲ್ಲ, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಂತ್ರಸ್ತೆ ನನಗೆ ಪರಿಚಯವಿದ್ದರು. ಆಕೆ ಲೈಂಗಿಕ ಕಿರುಕುಳಕ್ಕೆ ತುತ್ತಾದ ಬಗ್ಗೆ ಸಹ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ವಿಚಾರಣೆ ವೇಳೆ ಭವಾನಿ ಹೇಳಿರುವುದಾಗಿ ತಿಳಿದು ಬಂದಿದೆ.

ಭವಾನಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಮಹಿಳೆ ಮೇಲೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಭವಾನಿ ಪುತ್ರ ಮಾಜಿ ಸಂಸದ ಪ್ರಜ್ವಲ್ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿತ್ತು. ಆದರೆ ಹಾಸನದಲ್ಲಿ ಪೆನ್‌ಡ್ರೈವ್ ಬಯಲಾದ ಬಳಿಕ ಸಂತ್ರಸ್ತೆಯನ್ನು ಅಪಹರಿಸಿದ್ದ ಬಗ್ಗೆ ಅವರ ಪುತ್ರ ದೂರು ನೀಡಿದ್ದರು. ಈ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಕೆಲ ಬೆಂಬಲಿಗರನ್ನು ಬಂಧಿಸಿದ್ದ ಎಸ್‌ಐಟಿ, ವಿಚಾರಣೆಗೆ ಹಾಜರಾಗುವಂತೆ ಭವಾನಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಗೊಳಗಾದ ಅವರು ಕೆಲ ದಿನಗಳಿಂದ ನಾಪತ್ತೆಯಾಗಿದ್ದರು.

 

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!