ಬಿಲ್ಡರ್ ಮನೆಯಲ್ಲಿ ನಗದು ಸೇರಿದಂತೆ 18 ಕೋಟಿ ರು. ಮೌಲ್ಯದ ವಜ್ರ, ಚಿನ್ನಾಭರಣಗಳ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ನೇಪಾಳ ಮೂಲದ ದಂಪತಿ ಹಾಗೂ ಇತರೆ ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ತಂಡ ರಚನೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಲ್ಡರ್ ಮನೆಯಲ್ಲಿ ನಗದು ಸೇರಿದಂತೆ 18 ಕೋಟಿ ರು. ಮೌಲ್ಯದ ವಜ್ರಾ, ಚಿನ್ನಾಭರಣಗಳ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ನೇಪಾಳ ಮೂಲದ ದಂಪತಿ ಹಾಗೂ ಇತರೆ ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ತಂಡ ರಚನೆ ಮಾಡಲಾಗಿದೆ.ಒಂದು ತಂಡ ನೇಪಾಳ ಗಡಿ ಭಾಗದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರೆ, ಮತ್ತೊಂದು ತಂಡ ದೆಹಲಿಯ ರೈಲ್ವೆ ನಿಲ್ದಾಣಗಳಲ್ಲಿ ಶೋಧ ಕಾರ್ಯಕೈಗೊಂಡಿದೆ. ಇನ್ನೊಂದು ತಂಡ ನಗರದಾದ್ಯಂತ ದಂಪತಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಉದ್ಯಮಿ ಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದೆ.
ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಯಮಲೂರಿನ ನಿವಾಸಿ, ಬಿಲ್ಡರ್ ಎಂ.ಆರ್ ಶಿವಕುಮಾರ್ ಎಂಬುವರ ಮನೆಯಲ್ಲಿ 20 ದಿನಗಳ ಹಿಂದೆಯಷ್ಟೆ ನೇಪಾಳ ಮೂಲದ ದಿನೇಶ್(32) ಮತ್ತು ಕಮಲ(25) ಎಂಬ ದಂಪತಿ ಕೆಲಸಕ್ಕೆ ಸೇರಿಕೊಂಡಿದ್ದರು.ಜ.25 ರಂದು ದೂರುದಾರ ಶಿವಕುಮಾರ್ ಕುಟುಂಬದವರೆಲ್ಲಾ ಹೊರಗೆ ಹೋಗಿದ್ದಾಗ ಇವರ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿ ನೆಲಮಹಡಿ ಹಾಗೂ ಮೊದಲ ಮಹಡಿಯ ಬೆಡ್ ರೂಮ್ ಲಾಕರ್ ಮುರಿದು ಒಳ ನುಗ್ಗಿ ವಾರ್ಡ್‌ರೂಬ್‌ನಲ್ಲಿದ್ದ 11.5 ಲಕ್ಷ ನಗದು, 11.5 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಸ್ತುಗಳು, ವಜ್ರಾಭರಣಗಳನ್ನು ದೋಚಿ ಕೊಂಡು ಪರಾರಿಯಾಗಿದ್ದಾರೆ.
ಮಾಹಿತಿ ನೀಡಿದ ಅಡುಗೆ ಕೆಲಸದವಳು:ಬಿಲ್ಡರ್ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಅಂಬಿಕಾ ಎಂಬುವರು ಮನೆಯಲ್ಲಿ ಕಳ್ಳತನವಾಗಿದೆ ಎಂದು ಮಾಲೀಕರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಶಿವಕುಮಾರ್ ಅವರು ಮನೆಗೆ ವಾಪಸ್ ಆಗಿ ನೋಡಿದಾಗ ಲಾಕರ್‌ಗಳನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಹಣ ಹಾಗೂ ಚಿನ್ನಾಭರಣ ಕಳ್ಳತನವಾಗಿರುವುದು ಕಂಡು ಬಂದಿದೆ.
ಕಳ್ಳತನವಾಗಿರುವ ಆಭರಣಗಳ ಒಟ್ಟು ಮೌಲ್ಯ 18 ಕೋಟಿ ರು.ಗಳೆಂದು ಅಂದಾಜಿಸಲಾಗಿದೆ. ಮಾರತಹಳ್ಳಿ ಪೊಲೀಸ್ ಠಾಣೆಗೆ ಬಿಲ್ಡರ್ ಪುತ್ರ ಸೀಮಂತ್ ಎಸ್.ಅರ್ಜುನ್ ದೂರು ನೀಡಿದ್ದಾರೆ.ಸಂಚು ರೂಪಿಸಿ ಕಳ್ಳತನ
ನೇಪಾಳಿ ದಂಪತಿ ಸಂಚು ರೂಪಿಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿದ್ದಾರೆ. ಇನ್ನು ಕಮಲಾ, ದಿನೇಶ್ ಅವರನ್ನು ಕೆಲಸಕ್ಕೆ ಸೇರಿಸಿದವರ ಮೇಲೂ ಅನುಮಾನ ಮೂಡಿದೆ.ಈ ಹಿಂದೆ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಮಾಯಾ ಮತ್ತು ವಿಕಾಸ್ ಎಂಬುವರು ಕಳೆದ ತಿಂಗಳು ಇದ್ದಕ್ಕಿದ್ದಂತೆ ಊರಿಗೆ ಹೋಗಬೇಕು. ಏನೋ ಕೆಲಸ ಇದೆ ಅಂತಾ ಕೆಲಸ ಬಿಟ್ಟಿದ್ದರು. ನಂತರ ಕಮಲಾ ಹಾಗೂ ದಿನೇಶ್ ದಂಪತಿಯನ್ನು ಕೆಲಸ ಸೇರಿಸಿದ್ದರು.
20 ದಿನಗಳ ಹಿಂದಷ್ಟೇ ದಿನೇಶ್-ಕಮಲಾ ಕೆಲಸಕ್ಕೆ ಸೇರಿದ್ದರು. ಆದರೆ ಕೆಲವೇ ದಿನಗಳಲ್ಲಿ ಇವರಿಗೆ ಮನೆಯಲ್ಲಿರುವ ವಸ್ತುಗಳ ಬಗ್ಗೆ ಮಾಹಿತಿ ಇರಲು ಸಾಧ್ಯವಿಲ್ಲ. ವಿಕಾಸ್ ಮತ್ತು ಮಾಯಾ ದಂಪತಿ ಪ್ಲಾನ್ ನೀಡಿ ಇವರಿಂದ ಕಳ್ಳತನ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಈಗಾಗಲೇ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.